ಮಂಗಳವಾರ, ಏಪ್ರಿಲ್ 1, 2025

ಯೋಗಾಯೋಗ

ಇತ್ತೀಚಿಗೆ ಪಶ್ಚಿಮ ದೇಶಗಳಲ್ಲಿ, ಭಾರತದಲ್ಲಿ ಹೆಚ್ಚೆಚ್ಚು ಪ್ರಚಲಿತಕ್ಕೆ 'ಯೋಗ' ಬರುತ್ತಿದೆ. ಈಗಿನ ಕೇಂದ್ರ ಸರ್ಕಾರ ಸ್ವಲ್ಪ ಮುತುವರ್ಜಿ ವಹಿಸಿ ಮುಂದೆ ತಳ್ಳಿದ್ದರ ಪರಿಣಾಮವಾಗಿ ಯೋಗ 'ಅಂತಾರಾಷ್ಟ್ರೀಯ ದಿನಾಚರಣೆ' ಆಚರಿಸಿಕೊಳ್ಳುವ ಮಟ್ಟಕ್ಕೆ ತಲುಪಿದೆ. ಇಷ್ಟೇ ಅಲ್ಲದೆ ಪೂರ್ವ-ಪಶ್ಚಿಮ ದೇಶಗಳ ಅಸಂಖ್ಯ ಭಾಷೆಗಳ ನಿಘಂಟುಗಳಲ್ಲಿ ಯೋಗ, ಆಸನ ಎನ್ನುವ ಪದಗಳು ಸ್ಥಾನ ಪಡೆದುಕೊಂಡಿವೆ. ಅಮೆರಿಕಾ, ಕೆನಡಾ, ಯೂರೋಪಿನ ದೇಶಗಳಲ್ಲಿ ಎಣಿಕೆಗೂ ಮೀರಿ ಯೋಗ ತರಬೇತಿ ಕೇಂದ್ರಗಳು ತಲೆಯೆತ್ತುತ್ತಿವೆ.

ಇದೆಲ್ಲವೂ ಒಳ್ಳೆಯ ಬೆಳವಣಿಗೆಯೇ, ಆದರೆ ದುರಂತವೆಂಬಂತೆ ಬಹುತೇಕ ಜನರಿಗೆ ಯೋಗದ ಬಗ್ಗೆ ಸಂಪೂರ್ಣ ಅರಿವಿಲ್ಲ. ಯೋಗ ವೆಂದರೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೈ ಕಾಲು ತಿರುಗಿಸಿ ನರಗಳನ್ನೆಳೆದು ಮಾಡುವದೇ ಯೋಗ ಎಂದು 99 ಪ್ರತಿಶತ ಜನ ಅಂದುಕೊಂಡಿದ್ದಾರೆ. ಯೋಗ ಗುರುಗಳೆನಿಸಿಕೊಳ್ಳುವವರಿಗೂ ಇದರ ಬಗ್ಗೆ ಅಷ್ಟಾಗಿ ಅರಿವು ಇಲ್ಲದಿರುವುದು ಮತ್ತೂ ದೊಡ್ಡ ದುರಂತ ಎನಿಸುತ್ತದೆ.

ಯೋಗವೆಂದರೆ ಆಸನ ಮಾತ್ರವೇ ಎಂದು ಜಗತ್ತು ನಂಬಿರುವಂತೆ ತೋರುತ್ತಿದೆ. ಆದರೆ, ಆಸನವೆನ್ನುವುದು ಯೋಗದಲ್ಲಿ ಕೇವಲ ಒಂದೇ ಒಂದು ವಿಧಿ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಮಹರ್ಷಿ ಪತಂಜಲಿಯವರ ಅಷ್ಟಾಂಗ ಯೋಗದಲ್ಲಿ ಆಸನವೆನ್ನುವುದು ಕೇವಲ ಒಂದು ವಿಧಿ ಎನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲ. ಆಸನಗಳಿಂದ ಬರಿಯ ದೇಹದ ಭೌತಿಕ ಸೌಖ್ಯ ಕಾಪಾಡಿಕೊಳ್ಳಬಹುದೇ ವಿನಃ ಮತ್ತಿನ್ನಾವ ಪ್ರಯೋಜನವೂ ಆಗದು. ಅದರಲ್ಲೂ ಮಾನಸಿಕ, ದೈಹಿಕ ಸ್ವಚ್ಛತೆಗಳಿಲ್ಲದೆ, ನಿಯಂತ್ರಣಗಳಿಲ್ಲದೆ ಮಾಡುವ ಯೋಗ ನಿರರ್ಥಕವೇ ಸರಿ. ಇಷ್ಟಕ್ಕೂ ಯೋಗವೆಂದರೇನು? ಅದರ ಪರಿಪೂರ್ಣ ಫಲ ಪಡೆದುಕೊಳ್ಳುವ ವಿಧಾನಗಳೇನು? ಇವು ಈಗ ನಿಮಗೆ ಎದುರಾದ ಪ್ರಶ್ನೆಗಳಾಗಿರಬಹದು. ಅತ್ಯಂತ ಸರಳವಾದ ಉತ್ತರವೆಂದರೆ ದೇಹ ಮತ್ತು ಮನಸ್ಸುಗಳನ್ನು ಒಂದು ನಿಯಮಾವಳಿಯ ಚೌಕಟ್ಟಿನೊಳಕ್ಕೆ ತಂದುಕೊಂಡು ಅವೆರಡನ್ನು ನಿಗ್ರಹಿಸಿ ಸ್ವಾಸ್ಥ್ಯವಾಗಿಟ್ಟುಕೊಳ್ಳುವುದನ್ನೇ ಯೋಗ ಎನ್ನಬಹುದು. ಇದು ಬರಿ ಆರೋಗ್ಯದ ಸಮಸ್ಯೆ ಇರುವರು ಮಾಡಬೇಕಾದ ಕೆಲಸವೆಂದು ಅನೇಕರು ಅಂದುಕೊಂಡಿದ್ದಾರೆ. ಅದು ಸಂಪೂರ್ಣ ತಪ್ಪು ಕಲ್ಪನೆ.

ಕೆಲವು ಪ್ರಾಧ್ಯಜ್ಞಾನಿಗಳು ದೇಹ ಮತ್ತು ಮನಸ್ಸುಗಳು ಬೇರೆ ಬೇರೆ ಅಲ್ಲ ಅವೆರಡೂ ಒಂದೇ ಎನ್ನುತ್ತಾರೆ. ಶಂಕರಾಚಾರ್ಯರಂತಹ ಆಚಾರ್ಯ ಪುರುಷರು ನಾವು ಸೇವಿಸುವ ಆಹಾರದಲ್ಲಿನ ಅಧಮ ಗುಣವಸ್ತುಗಳು ಮಲವಾಗಿಯೂ, ಮಧ್ಯಮ ಗುಣವಸ್ತುಗಳು ಮಾಂಸ-ಮಜ್ಜೆಗಳಾಗುತ್ತವೆ, ಉತ್ತಮ ಗುಣವಸ್ತುಗಳು ಅಂದರೆ ಸತ್ವ ಗುಣ ಇರುವ ಆಹಾರದ ಅಂಗ ಮೇಲೆದ್ದು ಮನಸ್ಸಾಗುತ್ತದೆ ಎನ್ನುತ್ತಾರೆ. ಆಚಾರ್ಯ ಪತಂಜಲಿಯವರ ಯೋಗಸೂತ್ರದ ಪ್ರಕಾರವೂ ದೇಹ ಮತ್ತು ಮನಸ್ಸುಗಳು ಒಂದಕ್ಕೊಂದು ಬೆಸೆದುಕೊಂಡೇ ಇರುವಂತಹವು. ಒಂದಕ್ಕೆ ತಗುಲಿದ ವ್ಯಾಧಿ ಮತ್ತೊಂದಕ್ಕೂ ಅಂಟಿಕೊಳ್ಳುವುದು ನಾವು ಎಷ್ಟೋ ಉದಾಹರಣೆಗಳಲ್ಲಿ ಕಣ್ಣಾರೆ ಕಂಡಿರುತ್ತೇವೆ. ವಿಷಯ ಹೀಗಿರುವಾಗ ನಾವು ಬರಿಯ ದೈಹಿಕ ಆಯಾಮದಿಂದ ಯೋಗವನ್ನು ಆಚರಿಸಿದಲ್ಲಿ ಅದರಿಂದ ಯಾವ ಪ್ರಯೋಜನವೂ ಲಭಿಸದು. ದೈಹಿಕ ಆಯಾಮದ ಜೊತೆ ಜೊತೆಗೆ ಮಾನಸಿಕ ಆಯಾಮದಿಂದಲೂ ನಿಯಂತ್ರಣ ಸಾಧಿಸಿಕೊಳ್ಳುವುದು ಮುಖ್ಯ. ಮನಸ್ಸು ನಿಗ್ರಹಕ್ಕೆ ಒಳಪಟ್ಟರೆ ಕೂಡಲೇ ನಮ್ಮ ಯೋಚನೆಗಳು ನಿಗ್ರಹಕ್ಕೊಳಪಡುತ್ತವೆ. ಉತ್ತಮ ಆಲೋಚನೆಗಳು ಉತ್ತಮ ಕಾರ್ಯಗಳನ್ನು ಮಾಡಿಸುತ್ತವೆ. ಉತ್ತಮ ಕಾರ್ಯಗಳಿಂದ ಈ ಜೀವನವೇ ಉತ್ಕೃಷ್ಟವಾಗುತ್ತದೆ. ಇದು ಮನಸ್ಸಿಗೂ, ದೇಹಕ್ಕೂ, ಬದುಕಿಗೂ ಇರುವ ನೇರ ಸಂಬಂಧ. ಪ್ರತಿಯೊಬ್ಬರೂ ಈ ರೀತಿ ತಮ್ಮ ಜೀವನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಮುನ್ನಡೆದರೆ ನಮ್ಮ ರಾಜ್ಯ-ದೇಶಗಳೂ ಮುನ್ನಡೆದಂತೆ. ಜಾಗತೀಕರಣದ ಹಾಯಿದೋಣಿಯಲ್ಲಿ ಸಾಗುತ್ತಿರುವ ಜಗತ್ತಿನ ಏಳಿಗೆಗೂ ಮಹತ್ತರವಾದ ಸೇವೆ ಸಲ್ಲಿಸಿದಂತೆ. ಇದು ನಮ್ಮ ಜೀವನದ ಒಂದು ಹವ್ಯಾಸದಿಂದ ಜಗತ್ತಿನ ಪಥವನ್ನು ಪದಲಿಸುವ ಒಂದು ಮಹಾ ವಿದ್ಯಮಾನ, ಇನ್ನೊಂದರ್ಥದಲ್ಲಿ ಇದೊಂದು ಪವಾಡವೆಂದರೂ ತಪ್ಪಿಲ್ಲ. ಆದರೆ ಈ ವಿದ್ಯಮಾನ ಸಾಧ್ಯವಾಗುವುದು ನಾವು ಯೋಗದ ಆಚರಣೆಯನ್ನು ಸರಿಯಾಗಿ ಮಾಡಿದಾಗ ಮಾತ್ರವೇ.

ಅಷ್ಟಾಂಗ ಯೋಗದ ಸರಿಯಾದ ಕ್ರಮವನ್ನು ಅರಸುವ ಯೋಗ ಕುತೂಹಲಿಗಳಿಗೆ ಸರಿಯಾದ ಮಾರ್ಗ ತೋರುವುದು ಯೋಗ ಪಿತಾಮಹ, ಮಹರ್ಷಿ ಪತಂಜಲಿಯವರ ಯೋಗ ಸೂತ್ರ ಗ್ರಂಥ. ಸುಧೀರ್ಘವಾದ ಈ ಗ್ರಂಥದ ಪರಾಮರ್ಶೆ ಸಾಮಾನ್ಯರಿಗೆ ಕ್ಲಿಷ್ಟವಾದುದಾದರೂ, ಅದರ ಸರಳ ಅವತರಣಿಕೆಗಳು, ವ್ಯಾಖ್ಯಾನ ಕೈಪಿಡಿಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳನ್ನು ಅಭ್ಯಸಿಸಬಹುದು. ಯೋಗಿಯಾಗಬಯಸುವವನಿಗೆ ಚಿಕ್ಕದಾದ ಚೊಕ್ಕ ವಿವರಣೆಯನ್ನ ನಾನಿಲ್ಲಿ ಸೂಚ್ಯವಾಗಿ ನಮೂದು ಮಾಡಿದ್ದೇನೆ.

1. ಯಮ : ಅಷ್ಟಾಂಗ ಯೋಗ ಪದ್ಧತಿಯಲ್ಲಿ ಬಹು ಮುಖ್ಯವಾದುದು ಮತ್ತು ಯೋಗಿಯಾದವನು ಜೀವಮಾನ ಪರ್ಯಂತ ಆಚರಿಸಬೇಕಾದ ವಿಧಿ. ಜೀವನ ಶೈಲಿಯ ಮೇಲೆ ನಿಯಂತ್ರಣ ಇರಿಸಿಕೊಳ್ಳುವ ವಿಧಿ ಇದಾಗಿದ್ದು ಸ್ವಚ್ಛ-ಸುಂದರ-ಸರಳ ಜೀವನ ಸೂತ್ರವಾಗಿದೆ. ಇದು ಐದು ವಿಧಿಗಳನ್ನು ಹೊಂದಿದೆ.

  1. ಮಾನಸಿಕವಾಗಿ, ದೈಹಿಕವಾಗಿ, ಕಾರ್ಯಗಳ ಮೂಲಕವಾಗಿಯಾಗಲಿ, ಯೋಚನೆಯ ಮೂಲಕವಾಗಲಿ ಯಾರನ್ನು ನೋಯಿಸದಿರುವುದು.
  2. ನಿರ್ಲೋಭಿಗಳಾಗುವುದು, ಅವಶ್ಯಕತೆಗಿಂತ ಹೆಚ್ಚಿನದೇನನ್ನೂ ಅಪೇಕ್ಷಿಸಕೂಡದು. ಅಪೇಕ್ಷೆಯನ್ನು ತ್ಯಜಿಸುವುದು.
  3. ಯೋಚನೆ ಮತ್ತು ಕ್ರಿಯೆಗಳಲ್ಲಿ ಬ್ರಹ್ಮಚರ್ಯವನ್ನು ಆಚರಿಸುವುದು.
  4. ಯೋಚನೆ ಮತ್ತು ಕ್ರಿಯೆಗಳಲ್ಲಿ ಸತ್ಯನಿಷ್ಠರಾಗಿರುವುದು.
  5. ಕೊಡುಗೆಗಳನ್ನು ಪಡೆದುಕೊಳ್ಳದಿರುವುದು.

2. ನಿಯಮ : ಪ್ರಕೃತಿ ದತ್ತವಾದ, ಸಾಧನೆಗೆ ಮೂಲಕಾರಣವಾದ ದೇಹದ ಹಾಗು ಮನಸ್ಸಿನ ಕುರಿತಾದದ್ದು. ದೈಹಿಕ, ಮಾನಸಿಕ ಶುಚಿತ್ವವನ್ನು ಕಾಪಾಡುವುದು. ವಾತಾವರಣವನ್ನು ನಿರ್ಮಲವಾಗಿಡುವುದು. ಅಧ್ಯಯನ-ಅಭ್ಯಾಸಗಳ ಮೂಲಕ ಸೃಷ್ಟಿಕರ್ತನಲ್ಲಿ ಶರಣು ಹೋಗುವುದು. ವೇದ ಮಂತ್ರಗಳ ಉಚ್ಚಾರಣೆಯಿಂದ ದೇಹದಲ್ಲಿ ಸತ್ವ ಗುಣವನ್ನು ಉದ್ದೀಪಿಸುವುದು. ಇದನ್ನೇ ಸ್ವಾಧ್ಯಾಯ ಎನ್ನಲಾಗುತ್ತದೆ. ಮಂತ್ರಗಳನ್ನು ಜೋರಾಗಿ ಪಠಿಸುವುದು, ತುಟಿ ಚಲನೆಯಿರಿಸಿಕೊಂಡು ಶಬ್ದ ಬಾರದೆ ಪಠಿಸುವುದು ಹಾಗು ಮನಸಿನಲ್ಲೇ ಪಠಿಸುವುದು ಈ ಮೂರು ವಿಧಾನಗಳಿವೆ. ಇವುಗಳ ಪೈಕಿ ಮನಸ್ಸಿನಲ್ಲಿ ಪಠಿಸುವ ಮಂತ್ರಕ್ಕೆ ಹೆಚ್ಚಿನ ಮಹತ್ವ. ನೀರು, ಬೆಂಕಿ, ಗಾಳಿ, ಮಣ್ಣುಗಳನ್ನು ಬಳಸಿ ದೇಹದ ಬಾಹ್ಯವನ್ನು ಶುದ್ಧಿ ಮಾಡುವ ರೀತಿಯಲ್ಲೇ ಸತ್ಯ, ಕರ್ತವ್ಯ ನಿಷ್ಠೆ, ನಿರಾಡಂಬರ ನಡೆ, ಕಪಟ ರಹಿತ ಜೀವನದಿಂದ ಮನಸ್ಸನ್ನು ಶುದ್ಧಿ ಮಾಡಬಹುದು. ಅದೇ ಅಂತರಂಗ ಶುದ್ಧಿ. ಮನುಷ್ಯನಿಗೆ ಅಂತರಂಗ-ಬಹಿರಂಗ ಶುದ್ಧಿಗಳೆರಡೂ ಬಹು ಮುಖ್ಯವೇ. ಯಮ-ನಿಯಮಗಳು ಜೀವನ ಪರ್ಯಂತ ಪಾಲಿಸಬೇಕಾದ ಯೋಗದ ವಿಧಿಗಳಾಗಿವೆ.

3. ಆಸನ : ಇಂದು ವಿಧ ಪರ್ಯಂತ ಯೋಗಾಸನ ಎಂದೇ ಖ್ಯಾತಿ ಪಡೆದಿರುವುದು ಇದೇ. ವಿವಿಧ ಭಂಗಿಗಳ ಮೂಲಕ ದೇಹ ದಂಡಿಸುವುದು. ಆ ಮೂಲಕ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆದು ಮನಸ್ಸು ಏಕಾಗ್ರತೆಯನ್ನು ಸಾಧಿಸಲು ನೆರವಾಗುವುದು. 'ಆಸನ' ಪದದ ನಿಜವಾದ ಅರ್ಥ ಭಂಗಿ ಎಂಬುದು. ನಾವು ಸ್ವತಂತ್ರವಾಗಿ ಯಾವ ಭಂಗಿಯಲ್ಲಿ ತಲೆಬಾಗಿಸದೆ, ಭುಜ ಮತ್ತು ಬೆನ್ನು ಹುರಿಯನ್ನು ನೇರವಾಗಿ ನಿಲ್ಲಿಸಲು ಸಾಧ್ಯವೋ ಅದೇ ಭಂಗಿಯನ್ನು ಆಸನ ಎನ್ನಬಹುದು.

4. ಪ್ರಾಣಾಯಾಮ : 'ಪ್ರಾಣ' ಎಂದರೆ ಜೀವ ಶಕ್ತಿ, 'ಅಯಾಮ' ಎಂದರೆ ನಿಯಂತ್ರಿಸುವುದು. ಇನ್ನೂ ಗಾಢಾರ್ಥದಲ್ಲಿ ಉಸಿರಾಟದ ಮೂಲಕ ಪ್ರಾಣ ಶಕ್ತಿಯ ಮೇಲೆ ಹಿಡಿತ ಸಾಧಿಸುವುದು. ಪ್ರಾಣಾಯಾಮವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪೂರಕ, ಕುಂಭಕ, ರೇಚಕ. ಪ್ರಾಣಾಯಾಮವನ್ನು ಹೆಚ್ಚಾಗಿ ಮಾಡಿದಷ್ಟೂ ಮನುಷ್ಯ ಶಾಂತನಾಗುತ್ತಾನೆ.

5. ಪ್ರತ್ಯಾಹಾರ : ಮನುಷ್ಯನ ಇಂದ್ರೀಯಗಳು ಯಾವಾಗಲೂ ಹೊರ ಮುಖವಾಗಿಯೇ ಕೆಲಸ ಮಾಡುತ್ತಿರುತ್ತವೆ. ಪ್ರಾಕೃತಿಕವಾಗಿ ಅವುಗಳಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ. ನಮ್ಮ ಮಾನಸಿಕ ಶಕ್ತಿಯನ್ನು ಬಳಸಿ ಅವುಗಳ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ. ಇದನ್ನೇ ಪ್ರತ್ಯಾಹಾರ ಎನ್ನಲಾಗುತ್ತದೆ. ಹೊರಮುಖವಾಗಿರುವ ಮನಸ್ಸನ್ನು ಒಳಮುಖವಾಗಿ ತಿರುಗಿಸಿ ಅದನ್ನು ನಮಗೆ ಬೇಕಾದ ವಿಷಯದ ಮೇಲೆ ಕೇಂದ್ರೀಕರಿಸಲು ಬಳಸಿಕೊಳ್ಳಬೇಕು. ಯಾವ ಒಬ್ಬ ವ್ಯಕ್ತಿಗೆ ತನ್ನ ಮನಸ್ಸನ್ನು ತನ್ನ ಇಚ್ಛಾ ಶಕ್ತಿಯ ರೀತಿ ಬಳಸಿಕೊಳ್ಳಲು ಬರುತ್ತದೆಯೋ ಆ ವ್ಯಕ್ತಿ ಪ್ರತ್ಯಾಹಾರದಲ್ಲಿ ಸಾಧಕನಾಗಿದ್ದಾನೆಂದೇ ಅರ್ಥ.

6. ಧಾರಣ : ಒಂದು ವಿಷಯದ ಮೇಲೆ ಚಿತ್ತ ಮತ್ತು ಮನಸ್ಸುಗಳೆರಡನ್ನೂ ಕೇಂದ್ರೀಕರಿಸುವ ಶಕ್ತಿಯೇ ಧಾರಣ.

7. ಧ್ಯಾನ : ಮನಸ್ಸಿನ ಶಕ್ತಿಯನ್ನೂ ಮೀರಿ ಅದನ್ನು ಒಂದು ಕಡೆ ಸ್ಥಿರಗೊಳಿಸಿ, ಒಂದೇ ವಿಷಯದಲ್ಲಿ ಮನಸ್ಸನ್ನು, ಪ್ರಜ್ಞೆಯನ್ನೂ ಕಟ್ಟಿಹಾಕುವುದನ್ನು ಧ್ಯಾನ ಎನ್ನಬಹುದು.

8. ಸಮಾಧಿ : ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಸಬಲನಾದ ವ್ಯಕ್ತಿ ಈ ಪ್ರಕೃತಿಯೊಡನೆ ಬೆರೆತು ಪ್ರಕೃತಿಯೇ ಆಗಿಹೋಗುವ ವಿಧಾನವೇ ಸಮಾಧಿ.

ಇವುಗಳನ್ನು ಕಾಲ-ದೇಶಗಳ ಮಿತಿಯಿಲ್ಲದೆ ಎಲ್ಲಿ ಬೇಕಾದರೂ ಅಭ್ಯಸಿಸಬಹುದು. ಈ ಮೇಲೆ ನಮೂದಿಸಿದ ಕೆಲವು ವಿಧಿಗಳಂತೂ ವರ್ಷದ ಅಷ್ಟೂ ದಿನದ ಅನುಕ್ಷಣವೂ ಆಚರಿಸುವಂತಹವು. ಯಾವುದೋ ಒಂದು ಧರ್ಮಕ್ಕೆ ಪಂಗಡಕ್ಕೆ ಕಟ್ಟುಬೀಳದ ಈ ಪದ್ಧತಿಗಳು ಸರ್ವ ಜನಾಚರಣೆಗೆ ಯೋಗ್ಯವಾದವುಗಳಾಗಿವೆ. ಇವುಗಳ ಮೂಲಕ ಜನರು ಸಜ್ಜನರಾಗಿ, ತಮ್ಮ ಜೀವನದ ಮೇಲೆ ಹಿಡಿತ ಪಡೆದು ತಾವು ಬಯಸಿದ ಅದೃಷ್ಟವನ್ನು ತಾವು ಪಡೆದುಕೊಂಡರೆ ಈ ರಾಜ್ಯದ, ದೇಶದ, ವಿಶ್ವದ ಯೋಗಾಯೋಗ ಬದಲುಗೊಂಡಂತೆಯೇ.


-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...