ಪೂಜ್ಯರ ಕರುಣೆ

ಪೂಜ್ಯ ಶ್ರೀಗುರುಗಳ ಕರುಣೆ,

ಆಶೀರ್ವಾದ ಮಹಾಪ್ರಸಾದವಾಯಿತು. ಅಜ್ಞಾನ ಸುಜ್ಞಾನಗಳೆರಡೂ ಜಾಗೃತವಾದವು. ಅಜ್ಞಾನ ಹೊರತು ಹೋಗುವ ದಾರಿಗೆ ಜಾಗೃತವಾದರೆ, ಸುಜ್ಞಾನ ಬರುವ ದಾರಿಗೆ ಆಗುತ್ತಿದೆ. ಶ್ರೀ ಗುರು ರಕ್ಷೆ ಎಷ್ಟರ ಮಟ್ಟಿಗೆ ಎಂಬುದು ಈಗೀಗ ನಿಧಾನಕ್ಕೆ ಅರಿವಾಗುತ್ತಿದೆ. ಆಯಾ ಅರಿವು ಮುನ್ನಡೆದು ನಮ್ಮ ನಮ್ಮಗಳ ಜೀವನಕ್ಕೆ ಅಗಾಧವಾದುದೇನನ್ನೋ ಕೊಟ್ಟುಬಿಟ್ಟಾಗ ನಾವದನ್ನು ಇನ್ನಿಲ್ಲದಂತೆ ಬಲವಾಗಿ ನಂಬಿಬಿಡುತ್ತೇವೆ.



ಶ್ರೀ ಗುರು ಕೃಪೆಯಿಂದುಂಟಾದ ಈ ಅರಿವಿನಲ್ಲಿ ಮಹತ್ತರವಾದ ನಿಷ್ಠೆ, ಕಾರ್ಯ ತತ್ಪರತೆಗಳನ್ನೂ ಮೈಗೂಡಿಸಿಕೊಂಡ ಪಕ್ಷದಲ್ಲಿ ಶತಃ ಸಿದ್ಧವಾಗಿ ನಮ್ಮ ಜೀವನದವಶ್ಯಕತೆಗಳು ಪೂರೈಸಿ, ಇನ್ನೂ ಮಹತ್ತರವಾದ ವಿಚಾರಗಳ ಕಡೆ ಮನ ಮಾಡಲು ಅವಕಾಶವಾಗುತ್ತದೆ. ಶ್ರೀ ಗುರುಗಳು ಕರುಣಾಭಾವದ ಮೂರ್ತ ಸ್ವರೂಪಿಗಳಾಗಿದ್ದು ಬರಿಯ ನುಡಿಯಲ್ಲಿ ಹೇಳದೆ ನಡೆಯಲ್ಲೂ ನಡೆದು ತೋರ್ಪಡಿಸಿದ್ದಾರೆ. ಮನುಷ್ಯನೊಬ್ಬ ಜನನಾರಭ್ಯದಿಂದ ಕಲಿಯುವುದು ಸ್ವಾನುಭವದಿಂದ ಅಥವಾ ಪರರ ಅನುಭವದಿಂದ ಎರಡೇ. ಪರರ ಅನುಭವಗಳನ್ನು ನೋಡಿ ಓದಿ ಅರಿತುಕೊಳ್ಳುವ ಹಾಗು ಅದರಲ್ಲಿರುವ ಸದಂಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಭಕ್ತಿ ಪ್ರತಿಯೊಬ್ಬ ಶಿಷ್ಯನಿಗೂ ಸ್ಫುರಿಸಬೇಕು.

ಇಂದಿನ ಶಿಷ್ಯನು ಜೀವಮಾನ ಪರ್ಯಂತ ಶಿಷ್ಯ ಧರ್ಮದಲ್ಲಿಯೇ ನೆಲೆಸದೆ ಗುರುವಾಗುವ ಕಡೆ ಗಮನ ಹರಿಸಬೇಕು. ಶಿಷ್ಯ ಧರ್ಮದಲ್ಲಿದ್ದಾಗ ಒಬ್ಬ ವ್ಯ್ಯಕ್ತಿಯು ಮಾಡಿರತಕ್ಕ ಸಾಧನೆ, ಅಪರಿಮಿತ ಪರಿಶ್ರಮ ಆತನಿಗೆ ಗುರುವಾಗುವಂತೆ ಪ್ರೇರೇಪಿಸಬಲ್ಲುದು ಹಾಗು ಗುರು ಸ್ಥಾನದಲ್ಲಿ ಕುಳಿತ ಅವನಿಗೂ ಭದ್ರ ಬುನಾದಿಯಾಗುವುದು. ಶಿಷ್ಯ ಧರ್ಮದಲ್ಲಿ ಜಗತ್ತನ್ನು ಸೂಕ್ಷ್ಮ ದೃಷ್ಟಿಯಲ್ಲಿ ಅರಿಯಲು ಗುರುವಿನ ಅನುಭಾವವೇ ಮಹತ್ತರ ಪಾತ್ರ ವಹಿಸುತ್ತದೆ.

ಸ್ವಾನುಭವ, ಅಧ್ಯಯನ ಮೂಲಕ ಗುರು ತನ್ನ ಜ್ಞಾನ ಬಲವನ್ನು ಶಿಷ್ಯರಲ್ಲಿ ಹಂಚುತ್ತಾ ಹೋಗಿ ಅವರನ್ನು ಅಖಂಡ ಸಮರ್ಥರನ್ನಾಗಿ ಮಾಡಿದಂದಿಗೇ ಗುರು ಕಾಯಕ ಮುಕ್ತಾಯವಾಗುತ್ತದೆ. ಶಿಷ್ಯ ಧರ್ಮದ ವ್ಯಕ್ತಿ ಗುರುವಿನ ಮಾರ್ಗದಲ್ಲಿ ನಡೆಯಬೇಕೇ ಪರಂತು ಗುರುವಿನ ಸರ್ವವನ್ನು ಜಾಣ ಕುರುಡಾಗಿ ಹಿಂಬಾಲಿಸಕೂಡದು. ಮುಂದೊಂದು ದಿನ ಗುರುವಾಗಬಲ್ಲ ಯಾವ ವ್ಯಕ್ತಿಯೂ ಜಗತ್ತಿನ ಆಗು-ಹೋಗುಗಳನ್ನು ತನ್ನ ಅನುಭಾವದಿಂದ ದೊರಕಿಸಿಕೊಳ್ಳುತ್ತಾನೆ.  ಅದಕ್ಕೆ ಗುರುಗಳ ಮಾರ್ಗದರ್ಶನ ಕೇವಲ ದಾರಿ ದೀವಿಗೆಯಷ್ಟೇ. ಶಕ್ತ್ಯಾರ್ಹ ದಾರಿ ಕ್ರಮಿಸಬೇಕಾದವನು ಅವನೇ.

ಪೂಜ್ಯ ಶ್ರೀ ಗುರುಗಳು ಅಖಂಡ ಸನ್ಯಾಸತ್ವವನ್ನಾಚರಿಸಿ ಶಿವಯೋಗಿಯ ಧರ್ಮಕ್ಕೆ ಇನ್ನಿಲ್ಲದಂತೆ ಕೊಡುಗೆಯಾಗಿದ್ದಾರೆ. ಪ್ರಪಂಚದ ಸರ್ವರೂ ಶಿವಯೋಗಿಯಂತೆಯೇ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದರೆ ಶಿವಯೋಗಿಯಾದ ಪೂಜ್ಯ ಶ್ರೀ ಗುರುಗಳ ಅಪಾರ ಅಂಶಗಳನ್ನು ಸದ್ಭಕ್ತ ಸಂಸಾರಿಯೂ ಅನುಚಾನುವಾಗಿ ಆಚರಿಸಿಕೊಂಡು ಬರಲು ಅಪಾರ ಸಾಧ್ಯತೆಯಿದೆ.

ಮಾನವೀಯ ನೆಲೆಗಟ್ಟು ಅಪಾರ ಪಾತ್ರ ವಹಿಸುವ ಶ್ರೀಗುರುಗಳ ಜೀವಮಾನದಲ್ಲಿ ಎಲ್ಲರೂ ಅರಿತುಕೊಂಡು ನಡೆಯಬೇಕಾದು ಅಚಲ ನಂಬಿಕೆ, ಸರಳ ಸಿದ್ಧಾಂತಗಳು. ತನ್ನಲ್ಲಿ ತಾನು ಮಾಡುವ ಕೆಲಸದಲ್ಲಿ ನಿಷ್ಠೆ ಇರಿಸಿದ ವ್ಯಕ್ತಿ ಎಂದೂ ನಂಬಿಕೆ ಹೀನನಾಗಲಾರ. ಪ್ರಪಂಚದ ಯಾವೊಂದೂ ಅವನ ಕೈ ಬಿಡಲಾರವು. ಕಾರ್ಯ ನಿಷ್ಠೆ ಎಂಬುದು ಶ್ರೀ ಗುರುಗಳ ಜೀವನದಿಂದ ಹೆಕ್ಕಿ ತೆಗೆಯಲೇಬೇಕಾದ ಸ್ಫುಟವಾದ ಅಂಶ. ಸಂಸಾರಿಯಾದ ಕೂಡಲೇ ಕಾರ್ಯ ನಿಷ್ಠೆ ಗಾಳಿಗೆ ತೂರಲು ಸಾಧ್ಯವಿಲ್ಲ. ಹಾಗೆಯೇ ಸಾಂಸಾರಿಕ ಸಂಬಂಧಗಳನ್ನು ಕಡಿದೊಗೆದು ಹೊರಟು ಬಿಡಲು ಸಾಧ್ಯವಿಲ್ಲವೇ ಇಲ್ಲ. ಇವೆಲ್ಲವನ್ನು ನಿಭಾಯಿಸುವುದು ಜೀವನ ಧರ್ಮವಾಗುತ್ತದೆ. ತನ್ನ ಸುತ್ತಲಿನ ಪರಿಸರಕ್ಕೆ ನಿಷ್ಠನಾಗಿರುವ ಮನುಷ್ಯ ಎಲ್ಲ ಸೃಷ್ಟಿಗಳ ನಂಬಿಕಾರ್ಹ ವ್ಯಕ್ತಿಯಾಗುತ್ತಾನೆ. ಅವನಿಗೆ ತ್ಯಾಗವನ್ನೇ ಬೇಕಾದರೂ ಮಾಡುವ ಪ್ರಕೃತಿಯೂ ಆತನ ಸುತ್ತ ನಿರ್ಮಾಣವಾಗುತ್ತದೆ. ಅಂತಹ ಪ್ರಕೃತಿಯ ನಡುವೆ ಇರುವುದೇ ಅತೀವ ಅನಾಂದದಾಯಕ ಜೀವನ, ಜೀವನದ ಪರಮ ಧ್ಯೇಯವದೆ. ಅದು ಉಂಟಾಗಬೇಕಾದರೆ ಬದಲಾವಣೆ ನಮ್ಮ ಹೃದಯದಿಂದಲೇ ಅಆರಂಭವಾಗಬೇಕು.

ಸರಳ ಜೀವನ, ಸರ್ವ ನಿಷ್ಠೆ, ಹುಸಿಯಿಲ್ಲದ ನಡೆ-ನುಡಿಗಳು ಜೀವನದ ಅತೀ ಮುಖ್ಯ ಸಂಗತಿಗಳು. ಹಣವಲ್ಲ. ಸದಾ ಚಂಚಲತೆಯಿಂದ ಕೂಡಿದ ಹಣಬಲ ನಂಬಲರ್ಹವಾದ ಸಂಗತಿಯೇ ಅಲ್ಲ. ಆದ ಕಾರಣ ಮನುಷ್ಯನಾದವನು ಎಲ್ಲ ಕಾಲಕ್ಕೂ ಒಪ್ಪುವ ಮಾನವೀಯ ಮೌಲ್ಯಗಳನ್ನು ತನ್ನಲ್ಲಿ ಬೆಳೆಸಿಕೊಂಡು ತನ್ಮೂಲಕ ಅವು ಸಮಾಜದಲ್ಲಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು ಮನುಷ್ಯನೊಬ್ಬ ರಾಷ್ಟ್ರಕ್ಕೆ ಸಲ್ಲಿಸಬಹುದಾದ ಅಗಣಿತ ಕೊಡುಗೆ.

ಶ್ರೀಗುರುಗಳ ಅಭೂತಪೂರ್ವ ಹರಕೆಯಂತೆ ಎಲ್ಲರೂ ಸನ್ಮಾರ್ಗಕ್ಕೆ ಸನ್ಯಾಸವನ್ನೇ ಅವಲಂಬಿಸಬೇಕಿಲ್ಲ. ಧರ್ಮಪೀಠದಲ್ಲಿ ಕುಳಿತುಕೊಳ್ಳುವವನಿಗೆ ತನ್ನ ಬಗ್ಗೆ ಚಿಂತೆಯಿಲ್ಲದಂತಾಗಿಸಲು ವಿವಾಹ ವರ್ಜ್ಯವಾಗಿದೆ, ಸಂಸಾರಿಗಳಾಗಿಯೂ ಬದುಕಿನಲ್ಲಿ ಅಪಾರ ನಿಷ್ಠರಾಗಿ ಬಾಳಿ ಹತ್ತು ಹಲವು ಸಾಧನೆಗೈದ ಉದಾಹರಣೆಗಳು ಅನಂತವಾಗಿವೆ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...