ಶುಕ್ರವಾರ, ಅಕ್ಟೋಬರ್ 6, 2023

ಯುಗರ್ಷಿ


ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ,
ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ,
ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ,
ಅಲ್ಲೇನು ಸುಖವಿತ್ತೇ?, ಹೆಜ್ಜೆ ಹೆಜ್ಜೆಗೂ ಕಡು ಕಷ್ಟ,
ಕಂಸನ ಗೂಢಚಾರರನ್ನು, ವಿಷಕನ್ನಿಕೆಯರನ್ನು ನೀನೆ ಕೊಂದು
ಅವರಿಗೆ ಸ್ವರ್ಗದ ದಾರಿ ತೋರಿಸಿದೆ

ನೀನು ಎಲ್ಲೆಲ್ಲಿ ಕಾಲಿಟ್ಟರು ಅಲ್ಲೆಲ್ಲ ಹತ್ತು-ಹಲವು
ತಾಪತ್ರಯಗಳನ್ನ ನಿನ್ನ ಸೋದರಮಾವನೇ ಛೂ ಬಿಟ್ಟನು,
ಕಾಡಿಗೆ ಹೋದರೆ ಅಲ್ಲೇ, ನೀರಿಗೆ ಹೋದರೆ ಅಲ್ಲೇ,
ಹೋಗಲಿ ದನ ಕಾಯ್ದುಕೊಂಡಿರೋಣವೆಂದರೆ ಅಲ್ಲೂ
ನಿನಗೆ ತಾಪತ್ರಯಗಳು ತಪ್ಪಿದ್ದೇ ಇಲ್ಲ.
ಎಲ್ಲವನ್ನು ಅವುಡುಗಚ್ಚಿ ಸಹಿಸಿಕೊಂಡವನು ನೀನು.

ಇಷ್ಟೆಲ್ಲಾ ಕಡು ಕಷ್ಟದಲ್ಲಿ ಹಾಯ್ದು ನೀ ಬಂದುದಕ್ಕೋ
ಏನೋ, ನಿನ್ನ ಬಾಯಲ್ಲಿ ಹೊರಟ ಪದಗಳು ಗೀತೆಯಾಗಿ,
ಭಗವದ್ ವಾಣಿಯಾಗಿ ಈವತ್ತೂ ನಮ್ಮಲ್ಲಿ ಪಠಿಸಲ್ಪಡುತ್ತಿವೆ.
ನಿನ್ನ ವಾಣಿಯಿಂದ ಪಾರ್ಥನೂ ಸೇರಿ ಕೋಟ್ಯಾನುಕೋಟಿ ಜನ
ಪರಿವರ್ತನೆಗೊಂಡಿದ್ದಾರೆ, ಕೆಲವರು ಅದರಿಂದ ದನ
ಸಂಪಾದನೆಯ ಹಾದಿಯನ್ನೂ ಹಿಡಿದಿದ್ದಾರೆ!

ಸರಿ, ಮುಂದೇನು. ಗೊಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾದವನಾದೆ,
ಮಥುರೆಯ ಮನೆ-ಮನಗಳಲ್ಲಿ ನೀ ತುಂಬಿಹೋದೆ,
ಅಲ್ಲಿಗಾದರೂ ಕಷ್ಟಗಳು ನಿಲ್ಲಲಿಲ್ಲ, ಅರೆ ಕ್ಷಣ ಬಸವಳಿಯಲಿಲ್ಲ.
ಅಷ್ಟದಿಕ್ಪಾಲಕರೂ ನಿನ್ನ ಪರೀಕ್ಷಿಸಬಂದರು,
ಪರೀಕ್ಷಿಸಬಂದವರಿಗೆ ಪರೀಕ್ಷಾರ್ಥಿಯಾಗಿಯೂ, ನಿನ್ನ
ನಂಬಿದವರಿಗೆ ನಾಯಕನಾಗಿಯೂ ನೀ ನಿಂದೆ.

ಗೋವರ್ಧನ ಗಿರಿಯನ್ನು ಎತ್ತಿ ಅಷ್ಟದಿಕ್ಪಾಲಕರೇ
ಎದುರಾದರು ನನ್ನ ನಂಬಿ ಬಂದವರ ನಾ ಪರಿತ್ಯಜಿಸಲಾರೆ
ಎನ್ನುವುದನ್ನ ಜಗತ್ತಿಗೆ ಸೂಕ್ಷ್ಮವಾಗಿ ತೋರಿಸಿಕೊಟ್ಟೆ.
ಗೋಪಬಾಲರ ಸ್ನೇಹ, ನಂದ-ಯಶೋಧೆಯರ ಅಕ್ಕರೆ
ಇವೆಲ್ಲವನ್ನೂ ಮೀರಿಸಿದ ರಾಧೆಯ ನಿಷ್ಕಲ್ಮಶ ಪ್ರೇಮ
ಎಲ್ಲವೂ ನಿನ್ನ-ಮಥುರೆಯ ಬಿಗಿಯಾದ ಬಂಧಗಳಾದವು.

ಆದರೇನು, ಮಹಾ ವೈರಾಗ್ಯ ಮೂರ್ತಿಯಂತೆ ಕರ್ತವ್ಯವು
ಕಣ್ಣೆದುರಿಗೆ ಬಂದಾಗ ರಾಧೆಯ ಪ್ರೇಮವನ್ನು ಶಾಶ್ವತವಾಗಿ
ತೊರೆದುಬಿಟ್ಟೆ, ಆಡಿ ಬೆಳೆದ ಗೆಳೆಯರು, ನರ್ಮದೆಯ ಒಡಲು,
ಗೋ ಹಿಂಡು, ಮಥುರೆಯ ಪ್ರಕೃತಿ ಸಿರಿ ಎಲ್ಲವೂ ನಿನ್ನ ಕರ್ತವ್ಯಪ್ರೇಮಕ್ಕೆ
ಅಡ್ಡಿ ಬರಲೇ ಇಲ್ಲ, ಬಂದಿದ್ದರೂ ನೀನು ಅದೆಷ್ಟು ನೋವುಂಡು
ಬಿಸಿಯುಸಿರು ಹಿಡಿದು ಮಥುರೆಯ ತೊರೆದಿರಬೇಕು?!

ಮಥುರೆಯನ್ನು ತೊರೆದ ಮೇಲಾದರೂ ನೆಮ್ಮದಿ ಉಂಟಾಯ್ತೆ?
ಇಲ್ಲವೇ ಇಲ್ಲ. ಕಂಸ ಮರ್ಧನವೇ ದುಬಾರಿಯಾಯ್ತು
ಅದಕ್ಕೆ ನೀ ತೆತ್ತ ಬೆಲೆ ಹೇಳಲು ಸಾಧ್ಯವೇ?.
ನೀಚ ಕಂಸನ ಗೆಳೆಯರ ಬಳಗ ನಿನ್ನ ಮೇಲೆ ಅಮರಿಕೊಂಡಾಗ
ಯಾವೊಂದಕ್ಕೂ ಹಿಂದೇಟು ಹಾಕದೆ ಅದೆಷ್ಟು ಚಾಕಚಕ್ಯತೆಯಿಂದ
ಅವರನ್ನೆಲ್ಲ ಹಣಿದೆ, ಛಲಗಾರ ನೀನು.

ಸರಿಯಪ್ಪ, ಇವೆಲ್ಲಾ ಸರಿಯಷ್ಟೆ. ತದನಂತರವಾದರೂ
ನೆಮ್ಮದಿ ಸಿಕ್ಕಿತೇ. ಇಲ್ಲ ಇಲ್ಲ, ಆ ಪದವೊಂದನ್ನ ನಿನ್ನ ಜೀವನದೊಳಕ್ಕೆ
ನೀನು ಬಿಟ್ಟುಕೊಂಡೂ ಇರುವಂತೆ ತೋರುವುದಿಲ್ಲ
ಕಂಸ ಪ್ರೇಮಿ ರಕ್ಕಸರ ಮಹಾರ್ಭಟವನ್ನು ಉದಾಸೀನದಿಂದ ಮಣಿಸುವ
ನಿನ್ನದೇ ಪ್ರಯತ್ನಕ್ಕೆ ಸಮುದ್ರದಂಗಳದಲಿ ಕೋಟೆ ಕಟ್ಟಿಕೊಂಡೆ,
ಅದರಿಂದ ಕೆಲವರ ದೃಷ್ಟಿಯಲ್ಲಿ ಪುಕ್ಕಲನೂ, ಹೇಡಿಯೂ ಆದೆ.

ಶ್ಯಮಂತಕ ಮಣಿಯ ಹಗರಣ ಈ ವಾದಕ್ಕೆ ಕೆಲವು
ದಿನವಾದರೂ ನೀರೆರೆದು ಪುಷ್ಟಿ ನೀಡಿದ್ದಿರಬೇಕು
ಅದನ್ನೂ ಭಯಂಕರ ಹೋರಾಟದಿಂದಲೇ ಗೆದ್ದು ಬಂದೆ.
ಸಮುದ್ರದ ಮಧ್ಯೆ ಕೋಟೆ ಕಟ್ಟಿಕೊಂಡು ಮುಖ್ಯಭೂಮಿಕೆಯಿಂದ
ಮರೆಯಾದ ಮೇಲಾದರೂ ನೆಮ್ಮದಿಯಿಂದಲಿದ್ದೆಯಾ?
ಹದಿನಾರು ಸಾವಿರ ಹೆಂಡತಿಯರಾದರು ನಿನಗೆ!

ಅಲ್ಲಿಂದಾಚೆಗೆ, ಮಹಾಭಾರತದ ಮಹತ್ಕಾಲ
ಅಲ್ಲಿ ಪಕ್ಷಪಾತಿ ಎನಿಸಿಕೊಂಡೆ, ಸರಿ. ಸಜ್ಜನರ ಪಕ್ಷಪಾತಿಯಾಗುವುದು
ಧರ್ಮ ಎನ್ನುವುದನ್ನು ಆಡಿ ತೋರಿಸುವ ಬದಲು ಮಾಡೇ
ತೋರಿಸಿದೆ. ಘನತೆವೆತ್ತ ಉಗ್ರ ಸೇನ ಮಹಾರಾಜನ ಮೊಮ್ಮಗ
ನೀನು, ಯಾವ ಅಹಮಿಕೆಯೂ ಇಲ್ಲದೆ ರಾಜ್ಯ ಭ್ರಷ್ಟರಾಗಿದ್ದ
ಪಾಂಡವರಿಗೆ ಸಾರಥಿಯಾಗುವೆನೆಂದು ಒಪ್ಪಿಕೊಂಡುಬಿಟ್ಟೆ

ಕುರುಕ್ಷೇತ್ರದ ಆ ಯುದ್ಧ ಭೂಮಿಯಲ್ಲಿ ನಿನ್ನ ಪಾಂಚಜನ್ಯವೇ
ಯುದ್ಧಕ್ಕೆ ನಾಂದಿ ಗುರುತಾಗಿ, ಅಲ್ಲೆಲ್ಲ ಲಕ್ಷಾಂತರ ನರಮಾನವರು,
ಆನೆ, ಕುದುರೆ, ಒಂಟೆಗಳು ನೆತ್ತರು ಕಾರಿಕೊಂಡು
ಉಸಿರು ಚೆಲ್ಲಿಕೊಂಡಿದ್ದಾಯ್ತು, ಅಷ್ಟಷ್ಟೇ ಅಲ್ಲವಲ್ಲ,
ಉಭಯ ಬಣಗಳಲ್ಲೂ ವೀರಾಗ್ರಣಿಗಳು, ಛಲದಂಕರು,
ಅತಿರಥ-ಮಹಾರಥರೆಲ್ಲರೂ ನಿನ್ನ ವಿಧಿಗೆ ವಶರಾದರು

ರಾಜ ವ್ಯವಹಾರ ಚತುರನಾದ ನಿನ್ನ ಸಹಾಯವನ್ನ
ನಿನ್ನ ಸೋದರತ್ತೆಯ ಕುಟುಂಬದವರು ಮೊದಲೇ ಪಡೆದುಕೊಂಡಿದ್ದರೆ
ಈ ತಾಕಲಾಟವನ್ನೇ ತಪ್ಪಿಸಿಕೊಳ್ಳಬಹುದಿತ್ತು,
ಜೂಜಿಗೆ ಕೂರುವ ಮೊದಲು, ಕುಂತ ಮೇಲಾದರೂ
ನಿನ್ನೊಡನೆ ಒಂದಾವರ್ತಿ ಚಿಂತನೆ ನಡೆಸಬೇಕಾಗಿತ್ತು.
ಕೈ ಮೀರಿಹೋದ ಮೇಲೆ ನೀನು ತಾನೇ ಏನು ಮಾಡಿಯೇ?

ಪರಿಸ್ಥಿತಿಯೆಲ್ಲವೂ ಮೀರಿ ಹೋದ ಮೇಲೆ ಅವರೆಲ್ಲರೂ
ಒಂದೇ ಉಸುರಿಗೆ ನಿನ್ನ ಕರೆದರು, ಆಗಲಾದರೂ
ಕೊಂಕು-ಬಿಂಕ ತೋರದೇ, ಹಿಂದೆ ಕರೆಯದೆ ಇದ್ದುದಕ್ಕೆ
ಪ್ರತಿಭಟಿಸದೇ ನೀ ಬಂದುಬಿಟ್ಟೆ, ಅವರ ಕೈ ಹಿಡಿದುಬಿಟ್ಟೆ
ಆದರೂ ಅವರ ಒಂದು ಎಡವಟ್ಟಿನಿಂದಾದ ಯಾವುದನ್ನೂ
ನೀ ತಿದ್ದಲಾಗಲೇ ಇಲ್ಲ, ಅವರಿಗೆ ವನವಾಸ ತಪ್ಪಲಿಲ್ಲ

ಯುದ್ಧದ ಶರತ್ಕಾಲದಲ್ಲಿ ಗಾಂಡೀವಿಗೆ ಸಂಚಾಲಕನಾಗಿ
ರಥವೇನೇರಿ ನೀ ಮಾಡಿದ್ದೇನು ಕಡಿಮೆಯೇ ?
ಯುದ್ಧಕ್ಕೂ ಮೊದಲೇ ಪಾರ್ಥ ಅನ್ಯಮನಸ್ಕನಾದಾಗ
ಮೆಲ್ಲಗೆ ರಥವನಿಳಿದು, ಪಾರ್ಥನ ಕೈಹಿಡಿದು ಅವನನ್ನು ತಿದ್ದಿದೆ
ನಿನ್ನಾ ತಿಳುವಳಿಕೆಯ ಮಾತುಗಳು ಇಂದಿಗೂ ನಮ್ಮವರ
ಕೈ ಹಿಡಿಯುತಿವೆ, ಬಹುಷಃ ಈ ಭೂಮಿ ಇರುವವರೆಗೂ.

ಅಲ್ಲಿ ನೀನು ಬಿಟ್ಟಿದ್ದು ಯಾವುದನ್ನು? ಮಾನವ ಜೀವಿಯು
ಈ ಜಗತ್ತಿನಲ್ಲಿ ಸಭ್ಯನಾಗಿ, ಸುಸಂಸ್ಕೃತನಾಗಿ ಬದುಕುವುದಕ್ಕೆ
ಏನೇನು ಬೇಕೋ ಅದೆಲ್ಲವನ್ನು ಅರುಹಿದೆ, ಈ ನಿನ್ನ
ಜ್ಞಾನಬೋಧೆಗೆ ಕುರುಕ್ಷೇತ್ರದ ರಣಾಂಗಣ ಸಾಕ್ಷಿಯಾಯಿತಷ್ಟೆ
ಯುದ್ಧಸನ್ನದ್ಧರಾಗಿ ನಿಂತಿದ್ದ ಕೋಟ್ಯಾನು ಕೋಟಿ ಸೇನಾನಿಗಳ
ಸಮ್ಮುಖದಲ್ಲಿ ನೀ ಕೊಟ್ಟ ಭೋಧೆ ಅಮೃತ ಭೋದೆಯಾಯ್ತು

ಇವೆಲ್ಲ ಮುಗಿದು, ಯುದ್ಧದ ಸಂಧಿಕಾಲದ ಮೋಡ
ಸರಿದ ಮೇಲಾದರೂ ರಾಜ್ಯಾಧಿಕಾರ ಪಾಂಡವರಿಗಾದರೆ
ನಿನಗೆ ಸಿಕ್ಕಿದ್ದೇನು? ಕುರುವಂಶದವರ ಶಾಪ,
ಬೈಗುಳ, ದ್ವೇಷ, ಅಸಹನೆ, ಆವೇಶಗಳಷ್ಟೇ,
ನಿನ್ನತ್ತೆಯ ಮಕ್ಕಳಿಗೆ ರಾಜ್ಯಾಧಿಕಾರದ ಶ್ರೇಯ ದೊರೆತ
ನಂತರವೂ ನಿನಗೆ ಎದುರಾಗುವ ಕಷ್ಟಗಳು ದಿಕ್ಕೆಡಲೇ ಇಲ್ಲ.

ನಿನ್ನೀ ಸುಧೀರ್ಘ ಜೀವನದಲ್ಲಿ ನಿನಗೇನು ಬೇಕೆಂದು ಯಾರು ಕೇಳಲಿಲ್ಲ,
ನಿನ್ನ ಆಸೆ ಆಕಾಂಕ್ಷೆಗಳೇನಿದ್ದವು ಎಂದು ಯಾರು ಬೆದಕಲಿಲ್ಲ
ಎಲ್ಲರು ತಮ್ಮ ತಮ್ಮ ಒಳಿತು ನೋಡಿಕೊಂಡರು.
ಕಡೆಗೆ ಕುರುಕ್ಷೇತ್ರದ ಮಹಾಜಿರಂಗದಲ್ಲಿ ಕೂಡ ಪಾರ್ಥನಿಗೆ ಬಂದದ್ದು
ಅವನಿಗೆಲ್ಲಿ ಪಾಪ ಪ್ರಾಪ್ತವಾಗುವುದೋ ಎನ್ನುವ
ಸ್ವಾರ್ಥವೇ ಹೊರತು ಮತ್ತಿನ್ನೇನು ಅಲ್ಲವಲ್ಲ ?!

ಜೀವಮಾನ ಪರ್ಯಂತ ಕಷ್ಟ, ತಾಪತ್ರಯಗಳನ್ನೇ
ಉಂಡು, ತಿಂದು, ತೇಗಿ, ಯಾರೆಡೆಗೂ ಬೊಟ್ಟು
ಮಾಡಿ ತೋರಿಸದೆ ಹಸನ್ಮುಖಿಯಾಗಿ ಹೊರಟುಹೋದ
ಈ ಜಗದ ಋಷಿ ನೀನು, ಈ ಯುಗದ ಋಷಿ ನೀನು
ಇಷ್ಟು ತಾಳ್ಮೆ, ಯುಕ್ತಿ ನಮ್ಮೊಳಗೆ ಯಾರಿಗೆ ಬರಬೇಕು ಹೇಳು?
ಇಲ್ಲ, ಸಾಧ್ಯವೇ ಇಲ್ಲ. ಅದಿಲ್ಲಿ ಅಸಂಭವ.

ಇಂತಿದ್ದ ನಿನಗೆ ದೇವರ ಪಟ್ಟ ಕಟ್ಟಿದ್ದಾರೆ,
ನೀನಾಗಿದ್ದೇಯೋ ಅದನ್ನೆಲ್ಲ ಆಗುವುದಕ್ಕೆ ಹಿಂದೇಟು ಹಾಕುತಿಹರಿಲ್ಲಿ ,
ನಿನ್ನ ಹೆಸರಲ್ಲಿ ಹೋಮ-ಹವನ ಗಳು ಸಾಂಗೋಪಾಂಗವಾಗಿ ನಡೆಯುತಿವೆ
ಆರಾಧನೆ ಅಹರ್ನಿಶಿ ನಡೆಯುತ್ತಲೇ ಇದೆ,
ನೀನೆ ಹೇಳಿದಂತೆ ನೋಡು ಮತ್ತೊಮ್ಮೆ ಬಂದಿಲ್ಲಿ
ನಿನ್ನ ಹೆಸರನೇಳಿ ಒಕ್ಕಲೆಬ್ಬಿಸಿರುವ ನಿನ್ನದೇ ಜನರನು

ನೀನು ದೇವನೋ? ಮಾನವನೋ? ಶತ್ರುಗಳ ಪಾಲಿಗೆ ದಾನವನೋ?
ರಾಜ ನೀತಿಜ್ಞನೋ? ರಾಜ ತಂತ್ರ ಪರಿಣತನೋ? ಆಚಾರ್ಯ ಪುರುಷನೋ?
ಯುಗ ಪುರುಷನೋ? ಸಂಸಾರಿಯೋ? ವಿರಾಗಿಯೋ? ಎಲ್ಲರೊಳಗೆ
ನೀನೋ? ನಿನ್ನೊಳಗೆ ಎಲ್ಲರೋ? ಜಗತ್ಪ್ರೇಮಿಯೊ? ನೀನೇನೋ?
ಪದಗಳಲಿ ಕಟ್ಟಿಡಲು ಸಾಧ್ಯವಾಗೇ ಇಲ್ಲ, ನನ್ನೀ ಕಣ್ಣಲಿ
ನೀನು ಈ ಯುಗದ ಋಷಿ - ಯುಗರ್ಷಿ

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...