ಭಾನುವಾರ, ಡಿಸೆಂಬರ್ 18, 2016

ಅವರೂ ನಮ್ಮೊಳಗೊಬ್ಬರಾದರು

ಹತ್ತನೇ ಶತಮಾನದ ಆಸುಪಾಸಿಗೆ ಈಗಿನ ಇರಾನ್ ತನ್ನನ್ನು ಪರ್ಷಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಝೋರೆಸ್ಟ್ರಿಯನ್ ಗಳು ಅಲ್ಲಿನ ಮುಖ್ಯ ಜನಾಂಗವಾಗಿ ಗುರುತಿಸಿಕೊಂಡಿದ್ದರು. ಮುಸ್ಲಿಂ ದೊರೆಗಳು ಕ್ರಮೇಣ ಪರ್ಷಿಯಾ ದೇಶವನ್ನು ಆಕ್ರಮಿಸಿಕೊಳ್ಳತೊಡಗಿದಾಗ, ಝೋರೆಸ್ಟ್ರಿಯನ್ನರು ಅವರ ಆಟಾಟೋಪಗಳನ್ನು ತಡೆಯದಾದರು. ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿ ಮುಸ್ಲಿಂ ಧರ್ಮವೊಂದೇ ಅತಿ ಶ್ರೇಷ್ಠ, ಕಂಡ ಕಂಡವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದು ಯಾರಾದರೂ ಅದಕ್ಕೆ ನಿರಾಕರಿಸಿದರೆ ಅವರನ್ನು ಮುಗಿಸಿಬಿಡುವಂತಹ ಪಕ್ಕಾ ಸಂಪ್ರದಾಯವಾದಿ ಮುಸ್ಲಿಂ ಜನಾಂಗ(ಎಲ್ಲ ಮುಸ್ಲಿಂ ಜನಾಂಗ ಹೀಗಿಲ್ಲ, ಈ ಹೇಳಿಕೆ ಕೇವಲ ಧರ್ಮಾಂದ ದೊರೆಗಳು ಹಾಗು ಅವರ ಅನುಯಾಯಿಗಳಿಗೆ  ಮಾತ್ರ ಅನ್ವಯಿಸುತ್ತದೆ.) ನಿಧಾನಕ್ಕೆ ಪರ್ಷಿಯಾ ದೇಶದಲ್ಲಿ ಬೀಡು ಬಿಡಲು ಆರಂಭಿಸಿತು.
ಅರಬ್ ದೊರೆಗಳ ಹಲವಾರು ದಾಳಿಗೆ ಮೂಲ ಪರ್ಷಿಯನ್ನರು ಪ್ರತಿರೋಧ ಒಡ್ಡಿದರೂ ಅದು ಮುಗಿಯದ ಕಥೆಯಾಗಿ ಹೋಯಿತು. ಈಗಿನಂತೆ ಆಗ ವಿಶ್ವಸಂಸ್ಥೆಯಿಲ್ಲ. ಸಹಾಯಕ್ಕಾಗಿ ಕೂಗಿದರೆ ಬಂದವರು ಮುಂದೊಂದು ದಿನ ಅವರೇ ವೈರಿಗಳಾಗಿ ಆ ದೇಶವನ್ನು ನುಂಗಿ ನೀರು ಕುಡಿಯುವ ಭಯವಂತೂ ಇದ್ದೇ ಇತ್ತು. ತಮ್ಮ ಗಡಿ ಉಲ್ಲಂಘಿಸಿ ಒಳನುಗ್ಗಲು ಯತ್ನಿಸುತ್ತಿದ್ದ ಅರಬ್ ದೊರೆಗಳನ್ನು ಝೋರೆಸ್ಟ್ರಿಯನ್ನರು ತಡೆದಿದ್ದು ಬರೋಬ್ಬರಿ 200 ವರ್ಷಗಳ ಕಾಲ.  ಈ ಸಮಯವನ್ನು 'ಪರ್ಷಿಯನ್ ಸಾಮ್ರಾಜ್ಯದ ಎರಡು ಶತಮಾನಗಳ ನಿಶ್ಯಬ್ದತೆ' ಎಂದೇ ವರ್ಣಿಸಲಾಗಿದೆ.
                                           ಕ್ರಿ.ಪೂ ೫೦೦ ರಲ್ಲಿ ಪರ್ಷಿಯಾ ಸಾಮ್ರಾಜ್ಯ

ಧರ್ಮಬದ್ಧರಾದ ಅಲ್ಲಿನ ಮುಸ್ಲಿಮರಿಂದ ವಿಪರೀತ ಹಾನಿಗೊಳಗಾದ ಝೋರೆಸ್ಟ್ರಿಯನ್ನರು ಕೆಲವಾರು ಜನ ಪ್ರಾಣಕ್ಕೆ ಹೆದರಿ ಮತಾಂತರವಾದರೂ, ಕೆಲವರು ದೇಶ ತೊರೆದು ಪೂರ್ವ ದೇಶಗಳತ್ತ ವಲಸೆ ಹೊರಟು ಹೋದರು. ಬರಗಾಲ, ದಾಳಿ, ಅಂಟುರೋಗಗಳಿಗೆ ಹೆದರಿ ಊರು ಬಿಡುತ್ತಿದ್ದ ಪ್ರಕರಣಗಳನ್ನು ಕೇಳಿದ್ದೇವೆ, ಆದರೆ ಧರ್ಮವೊಂದರ ಕಟ್ಟುಬದ್ಧತೆಗೆ ಬಲಿಯಾಗಿ ದೇಶ ಬಿಡುವ ಧೌರ್ಬಾಗ್ಯ ಝೋರೆಸ್ಟ್ರಿಯನ್ನರದ್ದಾಯಿತು. ಹಾಗಲ್ಲದಿದ್ದರೆ ಧರ್ಮಾಂತರವಾಗುವುದು, ಅದೂ ಇಲ್ಲದಿದ್ದರೆ ಪ್ರಾಣ ಬಿಡುವುದೊಂದೇ ಝೋರೆಸ್ಟ್ರಿಯನ್ ಸಮುದಾಯಕ್ಕೆ ಉಳಿದುಕೊಂಡ ಆಯ್ಕೆಗಳಾದವು. ಪರ್ಷಿಯಾ ದಿಂದ ಕಾಲ್ಕಿತ್ತು ಪೂರ್ವಕ್ಕೆ ಗುಳೇ ಹೊರಟ ಝೋರೆಸ್ಟ್ರಿಯನ್ನರಿಗೆ ಕಂಡಿದ್ದು ಸಿಂಧೂ  ನದಿಯಿಂದಾಚೆಗೆ ಹಿಂದೂ ಮಹಾ ಸಾಗರದ ವರೆವಿಗೂ ವಿಸ್ತಾರವಾಗಿ ಹರಡಿಕೊಂಡಿದ್ದ ಭಾರತ, ಕ್ಷಮಿಸಿ ಬರೀ ಭಾರತವಲ್ಲ 'ಅಖಂಡ ಭಾರತ'.

ಎಲ್ಲೆಲ್ಲೂ ಹಿಂದೂ ಮಹಾ ಸಂಸ್ಥಾನಗಳು, ರಾಜ್ಯಗಳು, ಪ್ರಜೆಗಳನ್ನು ಮಕ್ಕಳೆಂದುಕೊಂಡು ರಾಜೋಚಿತ ಜವಾಬ್ದಾರಿ ಮೆರೆದಿದ್ದ ಸಂಸ್ಥಾನಿಕ ರಾಜರು. ಎಲ್ಲೆಲ್ಲೂ ಸುಭೀಕ್ಷ ಆಡಳಿತ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಂದೂ ಧರ್ಮದ ಹೆಮ್ಮೆಯ ಸ್ಥಳಗಳು, ನೀರು ಕೇಳಿದರೆ ಮಜ್ಜಿಗೆಯನ್ನೇ ಕುಡಿದು ಊಟ ಮಾಡಿಕೊಂಡು ಹೋಗಿ ಎನ್ನುವಷ್ಟು ಸುಶಿಕ್ಷಿತ ಅತಿಥಿ ಸತ್ಕಾರ, ಅತಿಥಿಗಳೆಂದರೆ ಇನ್ನಿಲ್ಲದ ಭಕ್ತಿ. ತಮಗೆ ತೊಂದರೆ ಮಾಡಿಕೊಂಡು ಅತಿಥಿಗಳನ್ನು ಪೊರೆದ ಅದೆಷ್ಟೋ ಕಥೆಗಳು, ಶರಣು ಬಂದವರನ್ನು ರಕ್ಷಿಸದಿರುವುದು ಹೇಡಿತನದ ಸಂಕೇತವೆನ್ನುವುದು ರಾಮಾಯಣ ಕಾಲದಿಂದಲೇ ಎಲ್ಲಾ ಭಾರತೀಯ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟಿದ್ದ ಬುದ್ಧಿ. ಇಂತಹವೆಲ್ಲ ಇನ್ನು ಎಷ್ಟೆಷ್ಟೋ ಭಾರತೀಯತೆಯ ಆಂತರ್ಯದಲ್ಲಿ ಅಡಗಿಕೊಂಡು ಕುಳಿತುಬಿಟ್ಟಿವೆ. ಅಂತೂ ಅವನ್ನೆಲ್ಲ ಕಂಡು ಝೋರೆಸ್ಟ್ರಿಯನ್ನರು ಹಿಗ್ಗಿ ಹೋದರು. ಕಷ್ಟ ಕಾಲದಲ್ಲಿ ಭಾರತೀಯರು ಆಗಬಹುದೇನೋ ಎಂದು ಬಗೆದು ಬಂದಿದ್ದ ಅವರ ಅನಿಸಿಕೆ ಸುಳ್ಳಾಗಲಿಲ್ಲ. ಸಿಂಧೂ ನದಿ ದಾಟಿದ ಝೋರೆಸ್ಟ್ರಿಯನ್ನರು ಸಿಂಧೂ ಗೆ ಹೊಂದಿಕೊಂಡಂತೆಯೇ ಇದ್ದ ಈಗಿನ ಪಾಕಿಸ್ತಾನದ ಸಿಂಧ್ ಹಾಗು ಭಾರತದ ಗುಜರಾತ್ ಪ್ರಾಂತ್ಯಗಳಲ್ಲಿ ಬೀಡು ಬಿಡಲು ಆರಂಭಿಸಿದರು.

ಪರ್ಷಿಯಾ ದೇಶದಿಂದ ಬಂದಿದ್ದರಿಂದ ಇವರನ್ನು ಪರ್ಷಿಯನ್ನರು / ಪಾರ್ಸಿಗಳು ಎಂದು ಕರೆಯಲಾಯಿತು. ಅಂದಿನಿಂದ ಝೋರೆಸ್ಟ್ರಿಯನ್ ಎಂಬ ಹೆಸರಿಗೆ ಬದಲಾಗಿ ಪಾರಸೀ ಎಂಬ ಹೆಸರೇ ಈ ಜನಾಂಗಕ್ಕೆ ಅಂಟಿ ಹೋಯಿತು.

ಗುಜರಾತ್ ಪ್ರಾಂತದ ಆಗಿನ ಅರಸ ಜಾದಿ ರಾಣಾ ಪಾರ್ಸಿಗಳನ್ನು ಬರಮಾಡಿಕೊಂಡ ರೀತಿಯೇ ವಿಭಿನ್ನ. ರಾಣಾ ತನ್ನ ರಾಯಭಾರಿಯನ್ನು ಕರೆದು ಅವನಲ್ಲಿ ಒಂದು ಹಂಡೆಗೆ ಕಂಠ ಪೂರ್ತಿ ಹಾಲು ತುಂಬಿಸಿ ಅದನ್ನು ಆಗಷ್ಟೇ ಪ್ರಾಂತಕ್ಕೆ ಬಂದು ಬೀಡು ಬಿಡುತ್ತಿದ್ದ ಪಾರ್ಸಿಗಳಿಗೆ ಕಳುಹಿಸುತ್ತಾನೆ. ಸಾಂಕೇತಿಕವಾಗಿ ಅದರ ಅರ್ಥ ಇಲ್ಲಿ ನಮಗೆ ಜಾಗವಿಲ್ಲ ತುಂಬಿಕೊಂಡಿದ್ದೇವೆ ಇನ್ನು ನಿಮ್ಮನ್ನೆಲ್ಲಿ ಪೋಷಿಸಲು ಸಾಧ್ಯ ಎಂದು. ಆದರೆ ಬುದ್ಧಿವಂತಿಕೆಯಲ್ಲಿ ತೀಕ್ಷ್ಣಮತಿಗಳಾಗಿರುವ ಪಾರ್ಸಿಗಳು ತುಂಬಿದ ಹಂಡೆ ಹಾಲಿಗೆ ಮಣಗಟ್ಟಲೆ ಸಕ್ಕರೆ ಸುರಿದು 'ನಾವೂ ನಿಮ್ಮ ನಡುವೆ ಹೀಗೆ ಅಂದರೆ ಹಾಲಿನಲ್ಲಿ ಸಕ್ಕರೆ ಬೆರೆತಂತೆ ಬೆರೆಯುತ್ತೇವೆ' ಎಂಬ ಸಂದೇಶವನ್ನು ಕೊಟ್ಟು ಕಳುಹಿಸಿದರು. ನಡೆಯಿಂದ ಸಂತೋಷಭರಿತನಾದ ರಾಣಾ ಕೂಡಲೇ ತ್ವರೆ ಮಾಡಿ ಪಾರಸೀ ಪ್ರಮುಖರನ್ನು ಭೇಟಿಯಾಗಿ ಆತನ ಪ್ರಾಂತದಲ್ಲಿ ಇರಲು ಕೆಲವು ಷರತ್ತುಗಳನ್ನು ಹಾಕಿದನು. ಪಾರ್ಸಿಗಳು ಹಿಂದೂ ಮುಂದೂ ನೋಡದೆ  ಅವುಗಳನ್ನು ಒಪ್ಪಿಕೊಂಡರೂ ಕೂಡ
ಷರತ್ತುಗಳೆಂದರೆ,
1. ಅವರ ಧರಿಸಿನ ಶೈಲಿ ಮೂಲ ಪಾರಸೀ ಶೈಲಿಯನ್ನು ಹೋಲದೆ ಸ್ಥಳೀಯ ಶೈಲಿಯಿಂದ ಕೂಡಿರಬೇಕು.
2. ವ್ಯಾಪಾರವೇ ಪಾರಸೀಗಳ ಮುಖ್ಯ ಕಸುಬಾದ್ದರಿಂದ ಸ್ಥಳೀಯ ಭಾಷೆಯಾದ ಗುಜರಾತಿಯನ್ನು ಖಡ್ಡಾಯವಾಗಿ ಕಲಿತು ಅದರಲ್ಲೇ ವ್ಯವಹರಿಸಬೇಕು.
3.ಆಹಾರ ಪದ್ಧತಿ ಸ್ಥಳೀಯರಂತೆಯೇ ಇರಬೇಕು, ಗೋಮಾಂಸ ಮತ್ತಿರ ಆಹಾರ ವಿಧಗಳನ್ನು ವರ್ಜಿಸಬೇಕು.

ಅವನು ಹಾಕಿದ ಷರತ್ತುಗಳಿಗೆಲ್ಲ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ಪಾರ್ಸಿಗಳು ಇಂದಿಗೂ ದನದ ಮಾಂಸ ಮುಟ್ಟುವುದಿಲ್ಲ. ಕೆಲವಾರು ಜನರು ಅಭ್ಯಾಸ ರೂಢಿಸಿಕೊಂಡಿದ್ದರು ಧರ್ಮಬದ್ಧರಾದ ಗುಜರಾತ್ ಪ್ರಾಂತದ ಪಾರ್ಸಿಗಳು ದನದ ಮಾಂಸ ವರ್ಜಿಸಿದ್ದಾರೆ. ಅವರ ಉಡುಗೆ ಶೈಲಿ ಈಗಲೂ ಭಾರತೀಯರಂತೆ ಇದ್ದು ಹೊರಗಿನಿಂದ ಬಂದರೂ ನಮ್ಮೊಳಗೆ ಸೇರಿಕೊಂಡು ನಮ್ಮವರೇ ಆಗಿ ಹೋದ ಪಾರಸೀ ಜನಾಂಗದ ಒಂದು ಉತ್ತಮ ಅತ್ಯುತ್ತಮ ನಡೆ.

ಬಿ ಜೆ ಪಿ ವರಿಷ್ಠ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾರತೀಯರ ಸಹಿಷ್ಣುತಾ ವಿಚಾರವಾಗಿ ಪದೇ ಪದೇ ಇಸ್ರೇಲ್ ದೇಶದ ನಡೆಯೊಂದನ್ನು ಪುನರುಚ್ಚರಿಸುತ್ತಿರುತ್ತಾರೆ. ಇಸ್ರೇಲ್ ದೇಶವು ತನ್ನ ಸಾಂವಿಧಾನಿಕ ಮೊದಲ ಅಧಿವೇಶನದಲ್ಲೇ ತನ್ನ ನೆಲದಿಂದ ಗುಳೆ ಹೊರಟ ಜನರನ್ನು ಅತ್ಯಾದರದಿಂದ ಬರ ಮಾಡಿಕೊಂಡು ಸಹಬಾಳ್ವೆಗೆ ಮಾದರಿಯಾಗಿ ನಿಂತ ಭಾರತೀಯರನ್ನು ಅಭಿನಂದಿಸಿದ ವಿಷಯ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆಧಾರ್ಮಿಕ ಹಿನ್ನೆಲೆಯಲ್ಲಿ ಒಂದು ಧರ್ಮದ ಹೊಡೆತವನ್ನು ತಾಳಲಾಗದೆ ಅಲ್ಲಿಂದ ಕಾಲ್ಕಿತ್ತ ಜ್ಯುಯೂ ಜನಾಂಗವನ್ನು ಎಲ್ಲರೂ ತಿರಸ್ಕಾರ ಮನೋಭಾವದಿಂದಲೇ ಕಾಣುತ್ತ ಹೋದರು, ಆದರೆ ಬಿಗಿದಪ್ಪಿಕೊಂಡಿದ್ದು ಭಾರತ ಮಾತ್ರ. ಅದಕ್ಕೆ ಕಾರಣ ನಮ್ಮ ಉಪನಿಷತ್ತು, ಧರ್ಮಗ್ರಂಥ ಗಳಿಂದ ನಾವು ಕಲಿತ 'ಅತಿಥಿ ದೇವೋಭವ' ಎನ್ನುವ ಸಾಲು.

ಮಾತನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೇ, ಮಧ್ಯ ಪ್ರಾಚ್ಯ ರಾಷ್ಟ್ರಗಳ ಮುಖಾಂತರ ಕೈಬರ್ ಕಣಿವೆ ದಾಟಿ ಭಾರತಕ್ಕೆ ಲಗ್ಗೆ ಇಟ್ಟ ಮುಸ್ಲಿಂ ದೊರೆಗಳು ಬಲವಂತದಿಂದ ಇಲ್ಲಿನ ರಾಜರುಗಳ ಮೇಲೆ ಅಧಿಕಾರ ಚಲಾಯಿಸಿ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿದರೂ ಇಲ್ಲಿನ ಜನರಿಗೆ ಅಂದರೆ ಮೂಲ ಭಾರತೀಯರಿಗೆ ಅವರೂ ನಮ್ಮಂತೆಯೇ ಅನ್ನಿಸಲಿಲ್ಲ, ಅನ್ನಿಸುವಂತೆ ಅವರು ನಡೆದುಕೊಳ್ಳಲೂ ಇಲ್ಲ. ಹೆಜ್ಜೆ ಹೆಜ್ಜೆಗೂ  ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳ ದಮನವಾಯಿತು. ಕೆಲವರು ಅವುಗಳನ್ನು ದಮನ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡರೂ ಕೂಡ. ಇಲ್ಲಿನ ಸಂಸ್ಕೃತಿಯ ಸಮಾಧಿಯ ಮೇಲೆ ತಮ್ಮ ಬೇಳೆ ಬೇಯಿಸಿಕೊಂಡು ಬಿಡುವ ಚಪಲವೂ ಕೆಲವರಿಗೆ ಉಂಟಾಗಿ ಅವುಗಳ ಪ್ರಯೋಗಕ್ಕೂ ಭಾರತದ ನೆಲ ವೇದಿಕೆಯಾಗಿ ಹೋಯಿತು.

ಇನ್ನು ಯೂರೋಪಿಯನ್ನರ ಭಾರತದ ದಾಳಿ ವಿಚಾರವು ಸರಿ ಸುಮಾರು ಅದೇ ಮುಳ್ಳಿಗೆ ತಗುಲಿಕೊಳ್ಳುವಂತದ್ದೇ. ಅವರು ಭಾರತದೆಡೆಗೆ ದೃಷ್ಟಿ ನೆಡುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಿರಿ ಸಂಪತ್ತು ಬಿಟ್ಟರೆ ಮತ್ತೇನೂ ಅಲ್ಲ. ಇಲ್ಲಿನ ಐಶ್ವರ್ಯದ ಮೇಲೆ ಮಾತ್ತ್ರ ಕಣ್ಣಿಟ್ಟು ದೇಶದ ಒಳ ಹೊಕ್ಕ ಐರೋಪ್ಯರು ಇಲ್ಲಿನ ಮತ್ತಷ್ಟು ಕೆಡುಕುಗಳನ್ನು ತಮ್ಮ ಅನುಕೂಲಕ್ಕೆ ಬಳಸಿ ಕೊಂಡರು. ವಿಚಾರದಲ್ಲಿ ನಮ್ಮದೂ ತಪ್ಪಿದೆ, ಆದರೂ ಸಮಯಕ್ಕೆ ತಕ್ಕಂತೆ ಎಲ್ಲವನ್ನು ಉಪಯೋಗಿಸಿಕೊಂಡ ಅವರು ಭಾರತದೊಳಗೆ ಭದ್ರ ಬುನಾದಿಯೊಂದನ್ನು ಕಟ್ಟಿಕೊಂಡರು ಹಾಗು ತಾವು  ಬೆಳೆದರು. ಇಷ್ಟಾದರೂ ಭಾರತದ ಜನಗಳಿಗೆ ಅವರು ನಮ್ಮವರು ಎನಿಸಲಿಲ್ಲ.


ಅಷ್ಟೇ ಏಕೆ ಸ್ವಾತಂತ್ರ್ಯ ದಕ್ಕಿ ಪ್ರಜೆಗಳೇ ಪ್ರಭುಗಳನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುವಂತಾದರೂ ಪ್ರಭುಗಳು ನಮ್ಮ ಪ್ರಜೆಗಳಿಗೆ ನಮ್ಮವರೆನಿಸುತ್ತಿಲ್ಲ. ಕಾರಣ ಸಿಂಹಾಸನಾಧೀಶ್ವರರಾದವರೆಲ್ಲ ತಮ್ಮ ಮನೆ ಮನವನ್ನು ಭ್ರಷ್ಟಾಚಾರದ ಮೂಲಕ ಬೆಳಗಿಕೊಳ್ಳುತ್ತಿದ್ದಾರೆ. ನನಗೆ ಒಮ್ಮೊಮ್ಮೆ ಅನಿಸುತ್ತಿರುತ್ತದೆ ಭಾರತೀಯರದು ಅದೆಂತಹ ದೌರ್ಭಾಗ್ಯ. ಎಂದು ಭಾರತೀಯರಿಗೆ ನಮ್ಮವರು, ನಮ್ಮ ಮಣ್ಣಿನವರು ಎನಿಸುವ ಆಡಳಿತ ಸಿಗುವುದು. ಅದಕ್ಕೆ ಇವರೆಲ್ಲರನ್ನು ನೋಡಿ ನನಗನ್ನಿಸಿತು ನಮ್ಮ ಇಷ್ಟಕ್ಕೆ ಒಗ್ಗಿಕೊಂಡು ಬಾಳು ಕಟ್ಟಿಕೊಂಡ ಏಕೈಕ ಭಾರತೀಯೇತರ ಜನಾಂಗ ಪಾರಸೀ ಜನಾಂಗ, ಅದಕ್ಕೆ ತಲೆ ಬರಹ ಕೊಟ್ಟಿದ್ದು 'ಅವರೂ ನಮ್ಮೊಳಗೊಬ್ಬರಾದರು'.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...