ಭಾನುವಾರ, ಮಾರ್ಚ್ 12, 2017

ಕಾಯಕ ಯೋಗಿಯ ಶ್ರೀಪಾದುಕೆ

ಅದು 2010 ಶಿವರಾತ್ರಿ ಹಬ್ಬದ ಮರುದಿನ ನಾನು ಸಿದ್ಧಗಂಗೆಗೆ ಹೋಗಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಹೋಗಿ ಬರುವುದಕ್ಕೂ ಹತ್ತಿರವೂ ಹಾಗು ಕಡಿಮೆ ಖರ್ಚು ಆದ್ದರಿಂದ ಸಿದ್ಧಗಂಗೆ ನಮಗೆಲ್ಲ ಕೂಗಳತೆ ದೂರದಲ್ಲೇ ಇದ್ದಂತೆ ಭಾಸವಾಗುತ್ತಿತ್ತು. ಕ್ರಮೇಣ ಸಮಯ ಸಿಕ್ಕಾಗಲೆಲ್ಲ ಸಿದ್ಧಗಂಗೆಗೆ ಹೋಗಿ  ಬರುವುದೇ ಒಂದು ಚಾಳಿಯಾಗಿಹೋಯಿತು. ನಾನು ಸಿದ್ಧಗಂಗೆ ಹೋಗಿ ಬಂದರೂ ಎಷ್ಟೋ ದಿನ ಮನೆಯಲ್ಲಿ ಗೊತ್ತೇ ಇರುತ್ತಿರಲಿಲ್ಲ. ಹಾಗಿರುತ್ತಿತ್ತು ನನ್ನ ಸಿದ್ಧಗಂಗೆ ಭೇಟಿ. ವಾಡಿಕೆಯಂತೆ ಶಿವರಾತ್ರಿ ಹಬ್ಬದ ಮರುದಿನವೇ ಸಿದ್ಧಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ. ಜಾತ್ರೆಗಾಗಿ ರಥ ಸಿದ್ದವಾಗಿ ನಿಂತಿತ್ತು, ಸಿದ್ಧಗಂಗೆಯ ಸುತ್ತ ಮುತ್ತಲಿನ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮಠದ ಆವರಣದಲ್ಲಿ ತೆರೆದು ಭರ್ಜರಿ ವ್ಯಾಪಾರಕ್ಕೆಂದು ತಯಾರಾಗಿ ಕೂತಿದ್ದರು. ನಾನು ಸಿದ್ಧಗಂಗೆಗೆ ಹೋದಾಗಲೆಲ್ಲ ಗಂಟೆಗಟ್ಟಲೆ ಸ್ವಾಮೀಜಿಯವರನ್ನೇ ತದೇಕ ಚಿತ್ತದಿಂದ ನೋಡುತ್ತಾ ನಿಂತಿರುತ್ತಿದ್ದೆ. ಅವರನ್ನು ನೋಡಲು ಶುರು ಮಾಡಿದರೆ ಅಲ್ಲಿಂದ  ಕಣ್ಣು ತೆಗೆಯುವ ಮನಸ್ಸೇ ಆಗುತ್ತಿರಲಿಲ್ಲ ನನಗೆ. ಸ್ವಾಮೀಜಿ ಕೂತ ಸ್ಥಳ ಬದಲಿಸಿ ಎಲ್ಲಾದರೂ ಹೊರಟರೆ ನಾನು ಅವರ ಹಿಂದೆಯೇ ಹೋಗುತ್ತಿದ್ದೆ.ಅವರ ಶ್ರೀ ಮಠದಲ್ಲಿ ಯಾರಿಗೂ ನಿರ್ಬಂಧವಿಲ್ಲದ ಕಾರಣ ಅಲ್ಲಿಗೂ ನಾನು ಹೋಗಿ ಅವರನ್ನೇ ನೋಡುತ್ತಾ ನಿಂತಿರುತ್ತಿದ್ದೆ. ಅಲ್ಲಿಂದ ಹಿಂತಿರುಗಿ ಬರಲು ಮನಸ್ಸು ಮಾಡುತ್ತಿದ್ದುದೇ ಸುಮಾರು ಮೂರುವರೆ ಗಂಟೆಗೆ ಬೆಂಗಳೂರಿಗೆ ಹೊರಡುವ ರೈಲಿನ ಸಮಯ ಜ್ಞಾಪಿಸಿಕೊಂಡಾಗ ಮಾತ್ರ.

ಹೇಳಿ ಕೇಳಿ ಅದು ರಥೋತ್ಸವದ ದಿನ, ಸ್ವಾಮೀಜಿ ತಮ್ಮ ದೈನಂದಿನ ಕಾರ್ಯಗಳ ಜತೆಗೆ ಇನ್ನು ಅನೇಕ ಕಾರ್ಯಕ್ರಮಗಳನ್ನು ನಿಭಾಯಿಸಬೇಕಾಗಿತ್ತು. ಮಠದ ಅಡುಗೆ ಒಪ್ಪಾರು ಗುಡಿಸುವ ಕೆಲಸದಿಂದ ಹಿಡಿದು ಮಠದ ಕಾರ್ಯಭಾರಗಳ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರಗಳೊಡನೆ ಸಮಾಲೋಚಿಸುವ ವರೆವಿಗೂ ಇನ್ನು ಮೀರಿ ಅಗತ್ಯ ಬಿದ್ದರೆ ವಿದೇಶಿ ಸಂಘಸಂಸ್ಥೆಗಳೊಡನೆಯೂ ಮಾತುಕತೆ ನಡೆಸುವ ವರೆಗೂ ಎಲ್ಲದಕ್ಕೂ ಸ್ವಾಮೀಜಿ ತುದಿಗಾಲಲ್ಲಿ  ನಿಂತಿರುತ್ತಿದ್ದರು.ಎಲ್ಲವನ್ನು ತಮ್ಮದೇ ಕೆಲಸವೆನ್ನುವಷ್ಟು ಶ್ರದ್ಧೆಯೂ ಅವರ ಪಾಲ್ಗೊಳ್ಳುವಿಕೆಯಲ್ಲಿಯೂ ಎದ್ದು ಕಾಣುತ್ತಿತ್ತು. ಕೆಲವೊಮ್ಮೆ ಸಿದ್ಧಗಂಗೆಗೆ ಭೇಟಿಕೊಟ್ಟ ಯುವಕರು ಕೂಡ ಸ್ವಾಮೀಜಿಯವರ ಕಾರ್ಯಪ್ರವೃತ್ತತೆ ಕಂಡು ನಾಚಿಕೊಂಡ ಉದಾಹರಣೆಗಳು ಇವೆ.

ಅಂದು ಎಂದಿನಂತೆಯೇ ಆಯಿತು. ನಾನು ಸಿದ್ಧಗಂಗೆಗೆ ಹೋದಾಗ ಸ್ವಾಮೀಜಿ ಮಠದ ಮುಂದಿನ ಕಟ್ಟಿಗೆಯ ಬೆಂಚಿನ  ಮೇಲೆ ಆಸೀನರಾಗಿದ್ದರು. ಭಕ್ತರೆಲ್ಲ ಅವರ ಕಾಲು ಮುಟ್ಟಿ ನಮಸ್ಕರಿಸಿ ಧನ್ಯತಾ ಭಾವ ತಳೆಯುತ್ತಿದ್ದರು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ನಗಿಸುವುದು, ಅಳಿಸುವುದು ಅಥವಾ ಭಾವಾವೇಶದ ಹೊಳೆಯಲ್ಲಿ ಕೊಚ್ಚಿಹೋಗುವಂತೆ ಮಾಡುವುದು ವಿರಳವೇನಲ್ಲ. ಆದರೆ ಒಬ್ಬ ವ್ಯಕ್ತಿಯ ಸಾಮಿಪ್ಯದಿಂದ ಧನ್ಯತಾ ಭಾವ ಪಡೆಯುವುದು ಅಥವಾ ಎದುರಿನ ವ್ಯಕ್ತಿಯಲ್ಲಿ ಭಕ್ತಿ ಭಾವ ಪ್ರವಹಿಸುವಂತೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ.  ಆದರೆ ಸಿದ್ಧಗಂಗೆಯಲ್ಲಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಅಂತದ್ದೊಂದು ಘಟನೆ ಜರುಗುತ್ತಿರುವುದನ್ನು ಕಂಡೆ. ಎಂದಿನಂತೆ ಅವರನ್ನೇ ನೋಡುತ್ತಾ ನಿಂತೆ.  ಕೆಲವು ಸಮಯವಾಯಿತು ನಂತರ ಸ್ವಾಮೀಜಿ ನಿಧಾನಕ್ಕೆ ಎದ್ದು ಕೋಲೂರಿಕೊಂಡು ಸಾದರ ಕೊಪ್ಪಲ ಬಳಿಯ ಅಡುಗೆ ಮಾಡುತ್ತಿದ್ದ ಒಪ್ಪಾರಿಗೆ ಬಂದು ಅಲ್ಲಿ ಬೇಯಿಸಿ ಕಡಾಯದೊಳಗೆ ತುಂಬಿದ್ದ ಅನ್ನವನ್ನೊಮ್ಮೆ ಮುಟ್ಟಿ ಪರೀಕ್ಷಿಸಿದರು. ಎಲ್ಲ ಅಡುಗೆ ಬೇಯುತ್ತಿದ್ದ ಕಡಾಯಗಳ ಬಳಿಗೂ ಹೋಗಿ ಆದೇನೆಂದು ಪರೀಕ್ಷಿಸಿ ಬರುತ್ತಿದ್ದರು. ಕೊನೆಯ ಕಡಾಯ ಬಂದಾಗ ಸ್ವಾಮೀಜಿ ಹಿಂದಕ್ಕೆ ತಿರುಗಿ ಅಲ್ಲಿದ್ದ ಒಬ್ಬ ಅಡುಗೆ ಭಟ್ಟರನ್ನು ಕೇಳಿದರು, "ಇವತ್ತು ಪಾಯಸ ಮಾಡ್ಬೇಕಾಗಿತ್ತು, ಮಾಡಿಲ್ಲವೋ. ನುಚ್ಚಕ್ಕಿ ಖಾಲಿಯಾಗಿದೆಯಾ" ಎಂದು ಕೇಳಿದರು. ಅಲ್ಲಿದ್ದ ಭಟ್ಟ "ಬುದ್ಧೀ, ಈ ಹಂಡೆಯೊಳಗೆ ಬೇಯುತ್ತಿರುವುದು ಪಾಯಸವೇ" ಎಂದಾಗ ಸ್ವಾಮೀಜಿ ಸ್ವಲ್ಪ ನಿರಾಳವಾಗಿ ಮುನ್ನಡೆದರು.

ಕಾಯಕಯೋಗಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳು





ದೇಶದ ಪ್ರಧಾನಿಯಿಂದ ಗೌರವ ನಮನ


                                    108ರ ಹೊಸ್ತಿಲಲ್ಲಿ ಬರಿಗಣ್ಣಿಂದಲೇ ದಿನ ಪತ್ರಿಕೆ ವಾಚನ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...