ಭಾನುವಾರ, ಸೆಪ್ಟೆಂಬರ್ 11, 2016

ನಿಜವಾದ ನಾಯಕ

ಅಂದು 1979 ಆಗಸ್ಟ್ 10, ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಮೈ ಮನಸುಗಳೆಲ್ಲಾ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸುತ್ತಲೇ ಸುತ್ತುತ್ತಿದ್ದವು. ಕಾರಣವಿಷ್ಟೇ, ಅಂದು ಭಾರತದ ವೈಜ್ಞಾನಿಕ ರಂಗದಲ್ಲಿ ಮಹತ್ವದ ದಿನ. ವಿಶ್ವದ ಅತೀ ದೊಡ್ಡ ಪ್ರಜಾತಂತ್ರ ದೇಶ ರಾಕೆಟ್ ಅನ್ನು ಪರೀಕ್ಷಾರ್ಥವಾಗಿ ಉಡಾಯಿಸಿ ವೈಜ್ಞಾನಿಕ ರಂಗದಲ್ಲಿ ತನ್ನದೂ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ತುದಿಗಾಲಲ್ಲಿ ನಿಂತಿತ್ತು. ಅಷ್ಟರಲ್ಲಾಗಲೇ ಭಾರತವೂ ರಾಕೆಟ್ ತಂತ್ರಜ್ಞಾನ ಹೊಂದಿದ ದೇಶವಾಗಬೇಕೆಂದು ಕನಸು ಕಾಣುತ್ತಲೇ ವಿಜ್ಞಾನಿ ವಿಕ್ರಂ ಸಾರಾಭಾಯ್ ವಿಧಿವಶರಾಗಿದ್ದರು. ಇತ್ತ ಸತೀಶ್ ಧವನ್ ಅಧ್ಯಕ್ಷತೆಯಲ್ಲಿ ಇಸ್ರೋ 'ಉಪಗ್ರಹ ಉಡ್ಡಯನ ವಾಹಕ'(Satellite Launching Vehicle-SLV) ವನ್ನು ತಯಾರು ಮಾಡಿಕೊಂಡು ಪರೀಕ್ಷೆಗೆ ಕಾದು ನಿಂತಿತ್ತು.

 ಉಡಾವಣೆಗೆ ಸಮಯ ನಿಗದಿಯಾಗಿ ಅದಾಗಲೇ ಕ್ಷಣಗಣನೆ ಆರಂಭವಾಗಿತ್ತು. ದೇಶ ವಿದೇಶದ ಬುದ್ಧಿ ಜೀವಿಗಳ ಕಣ್ಣು ಆ ಕ್ಷಣಕ್ಕೆ ಶ್ರೀಹರಿಕೋಟಾದ ಮೇಲೆ ನೆಟ್ಟಿತ್ತು. ದೇಶದ ಮಹೋನ್ನತ ವಿಜ್ಞಾನಿಗಳ ತಂಡ ಶ್ರೀಹರಿಕೋಟಾದ ನಿಯಂತ್ರಣ ಕೊಠಡಿಯಲ್ಲಿ ಉಸಿರು ಬಿಗಿ ಹಿಡಿದು ಉಡಾವಣೆಗೆ ತಯಾರಿ ಮಾಡಿಕೊಂಡಿದ್ದರು. ಸಮಯ ಸಮೀಪಿಸಿತು, ಇನ್ನು ಉಡಾವಣೆಗೆ ಕೆಲವೇ ಕೆಲವು ಸೆಕೆಂಡುಗಳಷ್ಟೇ ಬಾಕಿ ಎನ್ನುವಾಗ ಎಸ್ ಎಲ್ ವಿ ಯ ಆಂತರಿಕ ಕಂಟ್ರೋಲ್ ಸಿಸ್ಟಮ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಕಂಪ್ಯೂಟರ್ ಪತ್ತೆ ಹಚ್ಚಿ ಎಚ್ಚರಿಕೆ ಗಂಟೆ ಬಾರಿಸಿತು. ಗಡಿಬಿಡಿಗೊಳಗಾದ ವಿಜ್ಞಾನಿಗಳ ತಂಡ ಆ ಯೋಜನೆಯ ಮಿಷನ್ ಡೈರೆಕ್ಟರ್  ಆಗಿದ್ದ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಳಿಗೆ ದೌಡು ಕಿತ್ತರು. ಅಂತಿಮ ತೀರ್ಮಾನ ಮಿಷನ್ ಡೈರೆಕ್ಟರ್  ಅವರದೇ ಆಗಿರುವ ಕಾರಣ, ಎದುರಾಗಿರುವ ಸಮಸ್ಯೆಯನ್ನು ಅವರಲ್ಲಿ ಒಪ್ಪಿಸಿ ಅವರ ತೀರ್ಮಾನಕ್ಕೆ ಕಾದು ನಿಂತರು. ಕೇವಲ ಬೆರಳೆಣಿಕೆಯಷ್ಟು ಸೆಕೆಂಡುಗಳಷ್ಟೇ ಆಲೋಚಿಸಿದ ಕಲಾಮರು ಆಗಿದ್ದು ಆಗಲಿ ಇಂದು ಉಡಾಯಿಸಿಯೇ ತೀರೋಣವೆಂದುಬಿಟ್ಟರು. ವಿಜ್ಞಾನಿಗಳ ತಂಡ ಕಲಾಮರ ನಿರ್ದೇಶನದಂತೆ ರಾಕೆಟ್ ಉಡಾಯಿಸಿಯೂ ಬಿಟ್ಟಿತು. ಮುಂದೆ !!.......ಒಂದು ಹಂತ ಸರಿಯಾಗಿಯೇ ಕ್ರಮಿಸಿದ ರಾಕೆಟ್ ಎರಡನೇ ಹಂತಕ್ಕೆ ಜಿಗಿಯುವಾಗ ಸೋತು ಶಕ್ತಿಹೀನವಾಗಿ ಬಂಗಾಳ ಕೊಲ್ಲಿಯಲ್ಲಿ ಪತನವಾಯಿತು.

ಇಷ್ಟೇ ಸಾಕಾಗಿತ್ತು, ಅಷ್ಟರಲ್ಲಾಗಲೇ ಅಲ್ಲಿ ಜಮಾಯಿಸಿದ್ದ ಪತ್ರಕರ್ತರ ಗುಂಪು ವಿಜ್ಞಾನಿಗಳನ್ನು ಸುತ್ತುವರಿಯಿತು, ಪ್ರಶ್ನೆಗಳ ಸುರಿಮಳೆಯನ್ನೇ ಕರೆಯಿತು. ಮೊದಲೇ ಆರ್ಥಿಕ ಮುಗ್ಗಟ್ಟಿನಲ್ಲಿ ತೊಳಲಾಡುತ್ತಿರುವ ದೇಶದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬಂಗಾಳ ಕೊಲ್ಲಿಗೆ ಸುರಿದಿದ್ದು ಯಾವ ಪುರುಷಾರ್ಥ?...ಎಂಬಂತಹ ಪ್ರಶ್ನೆಗಳಿಗೆ ವಿಜ್ಞಾನಿಗಳ ತಂಡ ಉತ್ತರಿಸದಾಯಿತು. ಇದೀಗ ಸತೀಶ ಧವನ್ ಸ್ವಪ್ರೇರಿತರಾಗಿ ಮುಂದೆ ಬಂದು ವಿಜ್ಞಾನಿಗಳ ಪರ ವಹಿಸಿಕೊಂಡರು. ಪತ್ರಕರ್ತರ ತೀಕ್ಷ್ಣವಾದ ಪ್ರಶ್ನೆಗಳಿಗೆ ತಾವೊಬ್ಬರೇ ಏಕಾಂಗಿಯಾಗಿ ಉತ್ತರಿಸಿದರು. "ಹೌದು ...ಈ ಬಾರಿ ನಾವು ಸೋತಿರುವುದು ನಿಜ. ಆದರೆ ಇದೆ ಕೊನೆಯಲ್ಲ, ನಮ್ಮ ತಂಡ ಅತ್ಯುತ್ತಮ ವಿಜ್ಞಾನಿಗಳಿಂದ ಕೂಡಿದ್ದು ಮತ್ತೆ ಸಂಶೋಧನೆಗಳನ್ನು ಕೈಗೊಳ್ಳುತ್ತೇವೆ. ಆಗಿಹೋಗಿರುವ ಸೋಲನ್ನು ನೆನಪಿಸಿಕೊಂಡು ಚರ್ಚೆ ಮಾಡುವು ವ್ಯರ್ಥ ಕಾಲಹರಣ, ಹಾಗಾಗಿ ಮುಂದಿನ ಬಾರಿ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ" ಎಂದು ಹೇಳಿ ಆವತ್ತಿನ ಪ್ರೆಸ್ ಕಾನ್ಫರೆನ್ಸ್ ಮುಗಿಸಿ ಹೊರ ಬಂದಿದ್ದರು.

ಇದಾಗಿ ಕೆಲವೇ ಕೆಲವು ತಿಂಗಳುಗಳಲ್ಲಿ ಅಂದರೆ ಜುಲೈ18, 1980 ರಲ್ಲಿ ಎಸ್ ಎಲ್ ವಿಯಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಗಿ ಅದು ಯಶಸ್ವಿಯಾಯಿತು. ಆ ಮೂಲಕ ಭಾರತವು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ದಾಪುಗಾಲೊಂದನ್ನು ಇಟ್ಟಿತು. ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾಯಿಸಿದ ಕೆಲವು ಗಂಟೆಗಳಲ್ಲಿ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಕೂರಿಸುವ ಮೂಲಕ ಇಸ್ರೋ ಮಹತ್ವದ ಮೈಲಿಗಲ್ಲೊಂದನ್ನು ಮುಟ್ಟಿತು. ಕೂಡಲೇ ಪತ್ರಕರ್ತರು ವಿಜ್ಞಾನಿಗಳನ್ನು ಸುತ್ತುವರಿದರು,ಈ ಬಾರಿ ಪ್ರಶ್ನೆ ಕೇಳಲೆಂದಲ್ಲ ಬದಲಾಗಿ ಸಂತೋಷ ಹಂಚಿಕೊಳ್ಳಲೆಂದು. ಸತೀಶ್ ಧವನ್ ಈ ಬಾರಿ ಕಲಾಮರು ಹಾಗು ಇನ್ನಿತರ ವಿಜ್ಞಾನಿಗಳ ತಂಡಕ್ಕೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಕೊಟ್ಟು ತಾವು ದೂರವೇ ಉಳಿದರು.

ಮೇಲಿನ ಘಟನೆಯನ್ನು ಕಲಾಂರು ಹಲವಾರು ವೇದಿಕೆಗಳಲ್ಲಿ, ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಒಂದು ಟೀಮ್ ಗೆ ನಿಜವಾದ ನಾಯಕ ಹೇಗಿರಬೇಕು ಎಂದು ಸತೀಶ್ ಧವನ್ ಹೇಳಿ ಕಳಿಸಿದವರಲ್ಲ, ಬದಲಾಗಿ ಇದ್ದು ಆಚರಿಸಿ ಕಲಿಸಿದವರು. ತಾನು ಮುನ್ನಡೆಸುವ ತಂಡ ಸೋತಾಗ ಅದಕ್ಕೆ ಬಂದ ಟೀಕೆಗಳನ್ನು, ಪ್ರಶ್ನೆಗಳನ್ನು ನಿಜವಾದ ನಾಯಕನಾಗಿ ಸತೀಶ್ ಧವನ್ ತಾವೊಬ್ಬರೇ ಏಕಾಂಗಿಯಾಗಿ ಎದುರಿಸಿದರು. ಆದರೆ ಅದೇ ತಂಡ  ಗೆಲುವಿನ ನಗೆ ಬೀರಿದಾಗ ಸಂತೋಷವನ್ನು ಹಂಚಿಕೊಳ್ಳಲು ಅವರಿಗೆ ಬಿಟ್ಟು ತಮ್ಮ ಪಾಡಿಗೆ ತಾವು ಸುಮ್ಮನಿದ್ದರು.

ಜೀವನದ ಯಾವುದೇ ರಂಗದಲ್ಲಿ ಗೆಲುವನ್ನು ಹಂಚಿಕೊಳ್ಳುವುದು ಬಹಳ ಸುಲಭ. ಎಂತಹವರೂ ಆ ಕೆಲಸವನ್ನು ನಿರಾಯಾಸವಾಗಿ ಮಾಡಬಲ್ಲರು. ಆದರೆ ಸೋಲನ್ನು ಹಂಚಿಕೊಳ್ಳುವುದೇ ನಿಜವಾದ ಗುಂಡಿಗೆಯ ಪರೀಕ್ಷೆ. ಗೆಲ್ಲಲು ಬೇಕಾದ ದಾರಿಗಳು ಕಾಣುವುದೇ ಸೋಲನ್ನು ಹಂಚಿಕೊಂಡಾಗ. ಸೋಲನ್ನು ಹಂಚಿಕೊಳ್ಳಲು ಅಥವಾ ಎದುರಿಸಲು ಹಿಂದೇಟು ಹಾಕುವರಿಗೆ ಗೆಲ್ಲಲು ಬೇಕಾದ ದಾರಿಗಳು ಮಸುಕಾಗುತ್ತವೆ, ಅಲ್ಲಿಂದ ಅವರ ಸೋಲಿನ ಸರಮಾಲೆ ಪ್ರಾರಂಭವೇ ಸರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...