ಶುಕ್ರವಾರ, ಸೆಪ್ಟೆಂಬರ್ 30, 2016

ಮುತ್ತೊಂದು ರಾಜನಾದ ಬಗೆ


1951ರ ಒಂದು ದಿನ......ಡಾ||ರಾಜ್ ಕುಮಾರ್ ಆಗಿನ್ನೂ ಮುತ್ತುರಾಜರಾಗಿದ್ದ ಕಾಲ, ಬೇಸಿಗೆ ಮುಗಿದು ಮಳೆಗಾಲಕ್ಕೆ ಕಾಲಿಟ್ಟುಬಿಡುವ ಸಂಧಿ ಕಾಲ, ಮುತ್ತುರಾಜರಿನ್ನು ಗುಬ್ಬಿ ಕಂಪನಿಯಲ್ಲಿ ನಾಟಕ ಮಾಡುತ್ತಿದ್ದರು. ಆಗ್ಗೆ ಗುಬ್ಬಿ ಕಂಪನಿಯಾದರೂ ಒಂದೂರಲ್ಲಿ ನಿಲ್ಲದ ಸಂಚಾರಿ ಕಂಪನಿಯಾಗಿತ್ತು. ಆಗೆಲ್ಲ ನಾಟಕವೆಂದರೆ ತಮ್ಮನ್ನು ತಾವು ಮರೆತುಬಿಟ್ಟು ನಾಟಕ ಮಾಡುತ್ತಿದ್ದ ಜನಗಳೇ ಹೆಚ್ಚು, ಅದರಲ್ಲಿ ಅಮೋಘವಾದ ಮತ್ತು ಅಗಾಧವಾದ ತಲ್ಲೀನತೆಯಿರುತ್ತಿತ್ತು. ನಾಟಕಗಳ ಡೈಲಾಗುಗಳೆಲ್ಲ ನಾಟಕದ ಮಂದಿಗೆ ಕಂಠ ಪಾಠವಾಗಿಬಿಟ್ಟಿದ್ದವು ಅದು ಎಷ್ಟರ ಮಟ್ಟಿಗೆ ಎಂದರೆ ಯಾರು ಯಾವ ನಾಟಕದ ಯಾವ ಪಾತ್ರ ಕೇಳಿದರೂ ಆಗಲೇ ಹೇಳಿಬಿಡುವಷ್ಟು. 

ಸರಿ ಇಷ್ಟೆಲ್ಲಾ ಆದಮೇಲೆ ಗುಬ್ಬಿ ವೀರಣ್ಣನವರ ಆಶೀರ್ವಾದದಿಂದ ಮತ್ತು ಅವರದೇ ಬಂಡವಾಳದಿಂದ ಅದೇ ಇಸವಿಯ ಒಂದು ದಿನ ಗುಬ್ಬಿ ಕಂಪನಿಯ ವತಿಯಿಂದ ಹಾಸನದಲ್ಲಿ ನಾಟಕ ನಡೆಯಬೇಕೆಂದು ತೀರ್ಮಾನಿಸಿ ಸೆಟ್ಟು ಹಾಕಿಸಲಾಯಿತು. ಮಳೆ ಗಾಳಿ ಮುನ್ಸೂಚನೆ ನೋಡಿಕೊಂಡು ಜಾಣ್ಮೆಯಿಂದಲೇ ರಂಗ ಮಂಚವೂ ತಯಾರಾಯಿತು. ನಾಟಕವಾಡುವ ಸಮಯವೂ ಹತ್ತಿರಾಯಿತು ನೋಡ ನೋಡುತ್ತಲೇ ಇತ್ತ ಜನಗಳು ಸೇರಹತ್ತಿದರು, ಆಗೆಲ್ಲ ವೇದಿಕೆಗೆ ಮಾತ್ರ ಹೊದಿಕೆಇರುತ್ತಿತ್ತು ಅದು ಬಿಟ್ಟರೆ ಜನ ಕೂರುವ ಜಾಗವೆಲ್ಲಾ ಆಕಾಶಕ್ಕೆ ತೆರೆದ ಪ್ರದೇಶವೇ ಆಗಿರುತಿತ್ತು . ಪಾತ್ರಧಾರಿಗಳೆಲ್ಲರು ತಮ್ಮ ತಮ್ಮ ಉಡುಗೆ ತೊಡುಗೆಗಳೊಂದಿಗೆ ವೇದಿಕೆಯ ತೆರೆಯ ಹಿಂದುಗಡೆ ಬಂದು ಸೇರಿಕೊಂಡಿದ್ದು ಆಯಿತು. ಕಲಾವಿದರಿಗೆಲ್ಲ ನಾವು ಹೇಗೆ ಕಾಣಿಸುತ್ತೆವೆಯೋ, ನಮ್ಮ ನಮ್ಮ ಸರದಿಗೆ ನಾವು ಸರಿಯಾಗಿ ಬರುತ್ತೆವೆಯೋ ಹೇಗೋ, ನಮ್ಮ ಡೈಲಾಗುಗಳು ಮರೆತು ಹೋಗದಿದ್ದರೆ ಸಾಕು ಎಂದು ತಮಗೆ ತೋಚಿದ್ದ, ತಾವು ಜೀವಮಾನ ಪರ್ಯಂತ ಕಂಡು ಕೇಳಿದ್ದ ದೇವರುಗಳಿಗೆಲ್ಲ ಅಲ್ಲಿಂದಲೇ ತಮ್ಮ ಅಹವಾಲು ಸಲ್ಲಿಸುತ್ತಿದ್ದರು. ಇತ್ತ ಇವಕ್ಕೆಲ್ಲ ಏರ್ಪಾಟು ಮಾಡಿದ್ದ ನಿರ್ಮಾಪಕರಿಗೂ ಕೊಂಚ ಭಯ, ಏನೂ ಅವಗಡಗಳಾಗದಂತೆ ತಾವಂದುಕೊಂಡ ಹಾಗೆ ನಾಟಕ ಯಶಸ್ವಿಯಾಗಿ ಪ್ರದರ್ಶನವಾದರೆ ಸಾಕು ಎಂದು ಅವರು ಕನವರಿಸುತ್ತಿದ್ದರು. ಆದರೆ ಇನ್ನೇನು ನಾಟಕ ಆರಂಭವಾಗಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಸಂಘಟಕರಲ್ಲಿ ದುಗುಡ ಹೆಚ್ಚಾಗಿ ಹೋಯಿತು. ತಾವಂದುಕೊಂಡಿದ್ದ ಹಾಗೆ ನಾಟಕ ನಡೆಯುವುದಿಲ್ಲ ಎಂಬುವುದು ಅವರಿಗೆ ಖಾತ್ರಿಯಾಗಿ ಹೋಯಿತು. ಏಕೆಂದರೆ ಬೆಳಗಿನಿಂದಲೂ ಮರೆಯಾಗಿದ್ದ ಮಳೆ ಮೋಡಗಳು ಒಮ್ಮೆಲೇ ಅಲ್ಲಿಗೆ ನುಗ್ಗಿ ದಾಳಿ ಮಾಡುವರಂತೆ ಸುರಿಯಲು ಶುರು ಮಾಡಿಕೊಂಡುಬಿಟ್ಟಿದ್ದವು. ನೋಡ ನೋಡುತ್ತಿದ್ದಂತೆಯೇ ಸೇರಿದ್ದ ಜನಸ್ತೋಮ ಬೆಂಕಿಗೆ ಮಂಜು ಕರಗುವಂತೆ ಕ್ಷಣಾರ್ಧದಲ್ಲಿ ಕರಗಿ ಹೋಯಿತು.

 ರಂಗ ಗೀತೆಗಳಿಂದ ತುಂಬಿ ಪ್ರೇಕ್ಷಕರಿಂದ ಚಪ್ಪಾಳೆಗಳನ್ನು, ಭಾರಿ ಹಾರ ತುರಾಯಿಗಳನ್ನು ಸಮರ್ಪಿಸಿಕೊಳ್ಳಬೇಕಾಗಿದ್ದ ಆ ರಂಗ ಮಂಚವು ಸೇರಿ ಇಡೀ ರಂಗ ಮಂದಿರ ಮಳೆಯ ನೀರಲ್ಲಿ ನೆಂದು ತೊಯ್ದು ತೊಪ್ಪೆಯಂತಾಗಿ ಹೋಯಿತು. ಕಲಾವಿದರೆಲ್ಲರೂ ಇದೇನಾಗಿಹೊಯಿತು ಅನ್ನುವಷ್ಟರಲ್ಲಿ ತಾವು ನೆನೆಯದಿದ್ದರೆ ಸಾಕು ಎಂದು ಎಲ್ಲರು ಮಳೆಗೆ ಮರೆಯಾಗುವಂತೆ ಓಡಿಹೋದರು. ಕೆಲವು ನಿಮಿಷಗಳಲ್ಲಿಯೇ ಮಳೆ ತನ್ನ ಆರ್ಭಟವನ್ನು ಕಡಿಮೆ ಮಾಡಿಕೊಂಡಿತಾದರೂ ನೆನೆದು ಹೋದ ರಂಗ ಮಂಟಪದಲ್ಲಿ ರಾತ್ರಿಯಿಡೀ ಕುಳಿತು ನಾಟಕ ನೋಡಲು ಸಾಧ್ಯವೇ?, ಹಾಗಾಗಿ ಅಂದಿಗೆ ಮುಂದೂಡಲ್ಪಟ್ಟ ನಾಟಕ ಮರುದಿನವೇ ಪ್ರಸಾರ ಎಂದು ಮತ್ತೆ ಘೋಷಿಸಬೇಕಾಯಿತು. ಮರುದಿನ ನಾಟಕವಾಡಬೇಕಾದರೆ ರಂಗಮಂಟಪ ಒಣಗಿ ಅಚ್ಚುಕಟ್ಟಾಗಿ ಇರಬೇಕು. ಆದರೆ ಆಗಿನ ಸನ್ನಿವೇಶ ನೋಡಿದರೆ ರಂಗಮಂಟಪದ ತುಂಬಾ ಮಳೆ ನೀರು ತುಂಬಿ ತುಳುಕುತ್ತಿದೆ. ಇತ್ತ ಕಲಾವಿದರೆಲ್ಲರೂ ನಾಟಕದ ಉಡಿಗೆ ತೊಡಿಗೆ ಗಳನ್ನೂ ಕಳಚಿ ಅಲ್ಲಿಂದ ಮೆಲ್ಲಗೆ ಕಾಲ್ಕಿತ್ತರೆ ಅತ್ತ ಇಬ್ಬರು ಕಲಾವಿದರು ತಮ್ಮ ಉಡಿಗೆ ಬದಲಿಸಿ ತಮಗೆ ಊಟಕ್ಕೆ ಕೊಟ್ಟಿದ್ದ ಇಂಡಾಲಿಯಮ್  ತಟ್ಟೆಯನ್ನೇ ಬಳಸಿ ಆ ರಂಗಮಂಟಪದ ನೀರನೆಲ್ಲ ಎತ್ತಿ ಆಚೆಗೆ ಸುರಿಯಲು ಶುರುವಿಟ್ಟುಕೊಂಡರು, ಆ ಇಬ್ಬರು ಕಲಾವಿದರು ಸಂಜೀವಣ್ಣ ಎಂಬ ಒಬ್ಬರು ಮತ್ತು ಮುತ್ತುರಾಜರು!!, ಸಂಜೀವಣ್ಣ ನಾದರೂ ಆಗಾಗ್ಗೆ ಸುಧಾರಿಸಿಕೊಂಡು ಕೆಲಸ ಮಾಡಿದರು, ಮುತ್ತುರಾಜರು ಒಂದು ಕ್ಷಣವೂ ಕೈ ಕಾಲುಗಳಿಗೆ ಬಿಡುವು ಕೊಡದೆ ಇಡೀ ರಾತ್ರಿ ಆ ನೀರನೆಲ್ಲ ತೆಗೆದು ಹೊರಕ್ಕೆ ಎರಚಿ ಬೆಳಗಾಗುವುದರೊಳಗೆ ರಂಗ ಮಂದಿರದ ಬಯಲು ಒಣಗಲು ಅವಕಾಶ ಮಾಡಿದ್ದರು!!. ಬೆಳಗ್ಗೆದ್ದು ಅವರ ಸ್ನೇಹಿತರು " ಯಾಕೋ ಮುತ್ತು ರಾತ್ರಿಯೆಲ್ಲ ಇಷ್ಟು ಕಷ್ಟ ಪಟ್ಟಿದ್ದಿಯ" ಎಂದು ಕೇಳಿದಾಗ ಅವರು  "ಇದು ನಮಗೆ ಅನ್ನ ಕೊಡುವ ಭೂಮಿಯಪ್ಪಾ, ಇದು ಚೆನ್ನಾಗಿದ್ದರೆ ನಾವು ನಮ್ಮ ಮನೆ ಎಲ್ಲ ಚೆನ್ನಾಗಿರುತ್ತೆ" ಅಂತ ಹೇಳಿದರಂತೆ!!!!. ರಾಜ್ ಕುಮಾರ್ ಸುಮ್ಮ ಸುಮ್ಮನೆ ಮೇರು ವ್ಯಕ್ತಿತ್ವದವರಾಗಲಿಲ್ಲ. ಜೀವನದ ಪ್ರತೀ ಘಟ್ಟದಲ್ಲೂ ಅವರು ಕಲಿತರು. ಇಂತಹ ಘಟನೆಗಳಂತೂ ಅವರಿಗೆ ಮಹತ್ತರವಾದ್ದನ್ನೇ ಕಲಿಸಿದವು.ಅವರಲ್ಲಿ ಅಷ್ಟರ ಮಟ್ಟಿಗೆ ಶ್ರದ್ಧೆ ಇದ್ದಿದ್ದರಿಂದಲೇ ಅವರು ಚಿತ್ರ ರಂಗದ ಮೇರು ಶಿಖರವಾದರು, ಕನ್ನಡಕ್ಕೆ ಹೊನ್ನ ಕಳಶವಾದರು ಎಲ್ಲದಕ್ಕೂ ಹೆಚ್ಚಾಗಿ ಕಷ್ಟಗಳಿಗೆ ತುಡಿಯುವ, ಕಷ್ಟಗಳನ್ನು ನೋಡುತ್ತಲೇ ಬೆಳೆದ, ತಾವಿರುವವರೆಗೂ ಅನ್ನಕ್ಕೆ ಇನ್ನಿಲ್ಲದ ಗೌರವ ಕೊಡುತ್ತಿದ್ದ ಮಹಾ ಮಾನವಾತಾವಾದಿಯಾದರು ಮತ್ತು ಮೇರು ನಟರಾದರು.  

ವಿ.ಸೂ : ಕನ್ನಡ ಟಿವಿ9 ವಾಹಿನಿಯ 'ಒಂದು ಸತ್ಯ ಕಥೆ' ಸಂಚಿಕೆಯ ಕಂತಿನಿಂದ ಆರಿಸಿಕೊಂಡಿದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...