ಭಾನುವಾರ, ಅಕ್ಟೋಬರ್ 16, 2016

ತೆನಾಲಿ ರಾಮಕೃಷ್ಣ ಮತ್ತು ಬದನೆಕಾಯಿ ಗೊಜ್ಜು

ವಿಜಯನಗರದ ಅರಸು ಶ್ರೀಕೃಷ್ಣದೇವರಾಯರಿಗೆ ಬದನೇಕಾಯಿ ಪಲ್ಯವೆಂದರೆ ಬಲು ಪ್ರೀತಿ, ಅದರಲ್ಲೂ ವಿಶೇಷವಾದ ಬದನೇಕಾಯಿ ತಳಿಯೊಂದನ್ನು ಎಲ್ಲಿಂದಲೋ ತರಿಸಿ ತಮ್ಮ ಅಂತಃಪುರದ ಹಿತ್ತಲಲ್ಲಿ ಬೆಳೆಸಿದ್ದರು. ಅಂತಹ ಬದನೇಕಾಯಿ ತಳಿ ವಿಜಯನಗರ ಸಾಮ್ರಾಜ್ಯದಾದ್ಯಂತ ಎಲ್ಲೂ ಸಿಗುತ್ತಿರಲಿಲ್ಲವಂತೆ, ಅಂತಹ ಅದ್ಭುತ ಬದನೇಕಾಯಿ ತಳಿ ಅದು. ಅದರಿಂದ ಪಲ್ಯ/ಗೊಜ್ಜು ತಯಾರಿಸಿ ಅನ್ನದೊಂದಿಗೆ ಬಡಿಸಿದರೆ ಕೃಷ್ಣದೇವರಾಯರಿಗೆ ಬಹಳ ಅಚ್ಚುಮೆಚ್ಚು. ಹೀಗಿದ್ದ ವಿಶೇಷ ಬದನೇಕಾಯಿ ಪಲ್ಯವನ್ನು 'ನಾನೊಬ್ಬನೇ ತಿಂದು ಸವಿದರೆ ಸಾಲದು, ತನ್ನ ಅತ್ಯಾತ್ಮೀಯ ಸ್ನೇಹಿತನೂ ಹಾಗು ಮಂತ್ರಿಯು ಆದ ತೆನಾಲಿ ರಾಮಕೃಷ್ಣನಿಗೂ ಅದರ ರುಚಿ ತೋರಿಸಬೇಕು' ಎಂದುಕೊಂಡರು ಕೃಷ್ಣದೇವರಾಯರು. ಕೂಡಲೇ ಭೋಜನ ಕೂಟವೊಂದನ್ನು ಏರ್ಪಡಿಸಿ ತಮ್ಮ ಆತ್ಮೀಯ ಗೆಳೆಯನಾದ ತೆನಾಲಿ ರಾಮನನ್ನು ಆಹ್ವಾನಿಸಿದರು. ಹಾಜರಾದ ಆತನಿಗೆ ತಮ್ಮ ಅಂತಃಪುರದ ಹಿತ್ತಲಿನ ಬದನೆಕಾಯಿಂದ ತಯಾರಿಸಿದ ಗೊಜ್ಜನ್ನು ಬಡಿಸಲಾಯಿತು. ತೆನಾಲಿ ರಾಮನಂತೂ  ಆ ಬದನೇಕಾಯಿ ಗೊಜ್ಜನ್ನು ಮೆಚ್ಚಿಕೊಂಡದ್ದೇ ಮೆಚ್ಚಿಕೊಂಡದ್ದು. ಆತನು   ಇದನ್ನು ತಯಾರಿಸದವರು ಯಾರು? , ಇಂತಹ ವಿಶೇಷ ಬದನೇಕಾಯಿ ದೊರೆಯುವುದಾದರೂ ಎಲ್ಲಿ? ಎಂದು ಯೋಚನೆ ಮಾಡಹತ್ತಿದನು. ಕೊನೆಗೆ ರಾಜ ನಳ ತಜ್ಞರಿಂದ ಒಂದು ವಿಷಯ ತಿಳಿಯಿತು, ಇಂತಹ ಗೊಜ್ಜು ತಯಾರಿಸುವಲ್ಲಿ ವಿಶೇಷ ಬುದ್ಧಿ ಖರ್ಚು ಮಾಡುವ ಅವಶ್ಯಕೆತೆ ಏನಿಲ್ಲ. ಅದೆಲ್ಲ ಬದನೇಕಾಯಿ ಪ್ರಭಾವ ಎಂದು. ಇನ್ನೂ ಮುಂದುವರೆದು ಬಹು ಅಪರೂಪವಾದ ಆ ಬದನೇಕಾಯಿ ತಳಿಯನ್ನು ಕೃಷ್ಣದೇವರಾಯರು ಎಲ್ಲಿಂದಲೋ ತರಿಸಿ ಸುರಕ್ಷಿತವಾಗಿ ತಮ್ಮ ಹಿತ್ತಲಲ್ಲಿ ಬೆಳೆಸಿದ್ದಾರೆ ಹಾಗು   ಅರಸರ ಅಪ್ಪಣೆಯಿಲ್ಲದೆ ಹಿತ್ತಲಿಗೆ ಯಾರಿಗೂ ಪ್ರವೇಶವಿಲ್ಲ. ಬದನೆ ಗಿಡಕ್ಕೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿರುವ ಎಲ್ಲ ವಿಚಾರಗಳನ್ನು ನಳ ತಜ್ಞರು ಬಾಯ್ಬಿಡುತ್ತಾರೆ. ಈ ವಿಚಾರಗಳನ್ನೆಲ್ಲ ಕೇಳಿದ ಕೊಡಲೇ ತೆನಾಲಿ ರಾಮ ಇದು ನನಗೆ ದಕ್ಕದ ವಿಚಾರವೆಂದುಕೊಂಡು ರಾಜರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ಮನೆಯಲ್ಲಿ ವಿಶ್ರಾಂತಿಸುವ ಸಮಯದಲ್ಲಿ ಹೆಂಡತಿಯ ಜೊತೆ ಮಾತನಾಡುತ್ತಾ ಅರಮನೆಯಲ್ಲಿ ಇಂದು ಏರ್ಪಾಡಾಗಿದ್ದ ಭೋಜನದ ಬಗ್ಗೆ ಹಾಗು ಅಲ್ಲಿ ಬಡಿಸಲಾಗಿದ್ದ ಬದನೇಕಾಯಿ ಗೊಜ್ಜಿನ ಬಗ್ಗೆ ಹೇಳುತ್ತಾನೆ.

ಬದನೇಕಾಯಿ ಗೊಜ್ಜಿನ ಬಗ್ಗೆ ಕೇಳುತ್ತಿದ್ದಂತೆಯೇ ತೆನಾಲಿ ರಾಮನ ಹೆಂಡತಿಯ ಬಾಯಲ್ಲಿ ನೀರೂರಲು ಶುರುವಾಗುತ್ತದೆ.  ಕಾರಣವೆಂದರೆ ಆಕೆಗೂ ಬದನೇಕಾಯಿ ಗೊಜ್ಜು ಎಂದರೆ ಪಂಚ ಪ್ರಾಣ. ತನಗೂ ಆ ಬದನೇಕಾಯಿ ತಂದು ಕೊಡುವಂತೆ ಗಂಡನನ್ನು ಪೀಡಿಸಲು ಶುರು ಮಾಡುತ್ತಾಳೆ. ತೆನಾಲಿ ರಾಮ ಅಲ್ಲಿರುವ ಭದ್ರತೆ ಮತ್ತಿತರ ವಿಚಾರಗಳನ್ನು ತಿಳಿಸಿದರೂ ಆಕೆ ಕೇಳುವುದಿಲ್ಲ. ಆ ಬದನೇಕಾಯಿ ಪಲ್ಯಕ್ಕಾಗಿ ಹಠ ಹಿಡಿದು ಕುಳಿತು ಬಿಡುತ್ತಾಳೆ. ತೆನಾಲಿ ರಾಮ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅತ್ತ ರಾಜರನ್ನು ಹೋಗಿ ನೇರವಾಗಿ ಬದನೇಕಾಯಿ ಕೊಡಿ ಅಂದು ಕೇಳಲೂ ಸಾಧ್ಯವಿಲ್ಲ, ಕೇಳಿದರೂ ಅವರು ಕೊಡುವುದಿಲ್ಲವೆಂದು ಗೊತ್ತು ಇತ್ತ ಹೆಂಡತಿ ಒಂದೇ ಸಮ ಹಠ ಹಿಡಿದು ಕುಳಿತಿರುತ್ತಾಳೆ. ಅಳೆದೂ ತೂಗಿ ಯೋಚನೆ ಮಾಡಿದ ತೆನಾಲಿ ರಾಮ ರಾತ್ರಿಯ ಸಮಯದಲ್ಲಿ ರಾಜರ ಹಿತ್ತಲಿಗೆ ಹೋಗಿ ಬದನೆಕಾಯಿಗಳನ್ನು ಕದಿಯುವ ಯೋಜನೆ ಹಾಕಿಕೊಳ್ಳುತ್ತಾನೆ. ಹೆಂಡತಿಯೂ ಇದಕ್ಕೆ ಒಪ್ಪುತ್ತಾಳೆ.ಮರುದಿನದ ರಾತ್ರಿಯೇ ರಾಜರ ಹಿತ್ತಲಿಗೆ ನುಗ್ಗಿದ ತೆನಾಲಿ ರಾಮ ಕೆಲವಾರು ಬದನೆಕಾಯಿಗಳನ್ನು ಕದ್ದು ಮನೆಗೆ ತಂದು ಬಿಡುತ್ತಾನೆ.

ಆ ದಿನ ರಾತ್ರಿಯೇ ಬದನೇಕಾಯಿ ಗೊಜ್ಜು ತಯಾರಾಗುತ್ತದೆ. ಈಗ ಮತ್ತೊಮ್ಮೆ ತೆನಾಲಿ ರಾಮನಿಗೂ ಅವನ ಹೆಂಡತಿಗೂ ಜಗಳ ಶುರುವಾಗುತ್ತದೆ. ಮಾಡಿದ ಬದನೇಕಾಯಿ ಪಲ್ಯವನ್ನು ಮಗನಿಗೂ ಬಡಿಸಬೇಕೆನ್ನುವುದು ರಾಮಕೃಷ್ಣನ ಹೆಂಡತಿಯ ಆಸೆ, ಆದರೆ ಮುಂದೆಂದಾರೂ ರಾಜರು ತನಿಖೆಗೆ ಆದೇಶಿಸಿದರೆ ಮಗನೆಲ್ಲಿ ಬಾಯಿ ಬಿಟ್ಟುಬಿಡುವನೋ ಎಂಬ ಆತಂಕದಿಂದ ಅವನಿಗೆ ಬದನೇಕಾಯಿ ಗೊಜ್ಜನ್ನು ಬಡಿಸಬಾರದೆನ್ನುವುದು ತೆನಾಲಿ ರಾಮನ ವಾದ. ಮಗನಿಗೆ ಬಡಿಸದ ಹೊರತು ನಾನೂ ತಿನ್ನುವುದಿಲ್ಲವೆಂದು ಹೆಂಡತಿ ಹಠ ಹಿಡಿದು ಕುಳಿತುಬಿಡುತ್ತಾಳೆ.ಹೆಂಡತಿಯ ಮಾತಿಗೆ ಕಟ್ಟುಬಿದ್ದು ಮಗನಿಗೂ ಬದನೇಕಾಯಿ ಗೊಜ್ಜು ಬಡಿಸಲು ಒಪ್ಪಿಕೊಳ್ಳುತ್ತಾನೆ, ಆದರೆ ಅದಕ್ಕೂ ಮುನ್ನ ಬುದ್ಧಿವಂತಿಕೆಯಿಂದ ತನ್ನ ಮಗನ ತಲೆಕೆಡಿಸಿಬಿಡುತ್ತಾನೆ. ಅದು ಹೇಗೆ ಎಂದರೆ, ಬದನೇಕಾಯಿ ಗೊಜ್ಜು ಮಗನಿಗೂ ಬಡಿಸಲು ಒಪ್ಪಿಕೊಂಡ ತೆನಾಲಿ ರಾಮ ಕೂಡಲೇ ಮಗ ಏನು ಮಾಡುತ್ತಿದ್ದಾನೆ ಎಂದು ನೋಡುತ್ತಾನೆ. ಮಗ ಶಾಲೆಯಿಂದ ಬಂದು ಒಂದು ಸುತ್ತು ಆಟವಾಡಿ, ತನಗೆ ಶಾಲೆಯಲ್ಲಿ ಕೊಟ್ಟಿದ್ದ ಮನೆಗೆಲಸಗಳನ್ನೆಲ್ಲ ಮುಗಿಸಿ ಉಪ್ಪರಿಗೆಯ ಮೇಲೆ ಹಾಗೆ ನಿದ್ರೆಗೆ ಜಾರಿರುತ್ತಾನೆ. ಪರಿಸ್ಥಿತಿ ಅವಲೋಕಿಸಿದ ತೆನಾಲಿ ರಾಮ ಅಲ್ಲೇ ಪಕ್ಕದಲ್ಲಿದ್ದ ನೀರು ತುಂಬಿದ ಮಡಕೆಯನ್ನು ತೆಗೆದು ಅದರಲ್ಲಿದ್ದ ನೀರನ್ನೆಲ್ಲ ಮಗನ ಮೇಲೆ ಸುರಿದು ಬಿಡುತ್ತಾನೆ. ನಿದ್ರೆಯಲ್ಲಿದ್ದ ಮಗ ಕೊಡಲೇ ಚೀರುತ್ತಾ ಅಲ್ಲಿಂದ ಎದ್ದುಬಿಡುತ್ತಾನೆ. ಕೂಡಲೇ ತೆನಾಲಿ ರಾಮ ತನ್ನ ಹೆಂಡತಿಯನ್ನು ಜೋರಾಗಿ ಕೂಗಿ ಹೇಳುತ್ತಾನೆ. 'ಹೊರಗಡೆ ಮಳೆ ಬರುತ್ತಿದೆ, ಮಗನನ್ನು ಉಪ್ಪರಿಗೆಯಿಂದ ಒಳಗೆ ಕರೆಯಬಾರದೇ'.
ನಿದ್ದೆಗಣ್ಣಿನಲ್ಲಿದ್ದ ತೆನಾಲಿರಾಮನ ಮಗ ಹೊರಗೆ ಮಳೆ ಬರುತ್ತಿದೆ ಎಂದು ಕೊಂಡು ಒಳಗೆ ಬರುತ್ತಾನೆ. ಆಗ ಅವನಿಗೆ ಬದನೇಕಾಯಿ ಗೊಜ್ಜಿನ ಪಲ್ಯ ಬಡಿಸಿ ಊಟ ಮಾಡಿಸಿ ಮಲಗಿಸುತ್ತಾರೆ. ಅನಂತರ ತಾವು ಊಟ ಮಾಡುತ್ತಾರೆ. ಇದಾಗಿ ಮಾರನೇ ದಿನ ಅರಮನೆಯಲ್ಲಿ ಎಲ್ಲರ ಬಾಯಲ್ಲೂ ಬದನೇಕಾಯಿ ಕಳ್ಳತನವಾದ ವಿಷಯವೇ ಆಗಿಹೋಗುತ್ತದೆ.

ಕೃಷ್ಣದೇವರಾಯರು ಚೋರರ ಪತ್ತೆಗೆ ಆದೇಶಿಸುತ್ತಾರೆ.  ಆದರೆ ವಿಜಯನಗರದ ಪ್ರಧಾನಮಂತ್ರಿಗಳಿಗೆ ತೆನಾಲಿ ರಾಮನ ಬಗ್ಗೆ ಸಣ್ಣ ಅನುಮಾನ ಶುರುವಾಗುತ್ತದೆ. ಕಾರಣವಿಷ್ಟೇ, ಹಿತ್ತಲಲ್ಲಿದ್ದ ಅಪರೂಪದ ತಳಿಯ ಬದನೇಕಾಯಿ ಗಿಡ ಗೊತ್ತಿದ್ದು ಕೆಲವೇ ಕೆಲವರಿಗೆ. ಅದರಲ್ಲಿ ತೆನಾಲಿ ರಾಮನೂ ಒಬ್ಬನು. ಹಾಗು ಆ ಬದನೇಕಾಯಿ ರುಚಿ ನೋಡಿದ್ದವನಂತೂ ತೆನಾಲಿ ರಾಮನೊಬ್ಬನೇ. ಪ್ರಧಾನ ಮಂತ್ರಿಗಳು ಮಹಾರಾಜರಲ್ಲಿಗೆ ಹೋಗಿ ಈ ವಿಚಾರವನ್ನು ಭಿನ್ನವಿಸಿಕೊಳ್ಳುತ್ತಾರೆ. ಕೂಡಲೇ ತೆನಾಲಿ ರಾಮನನ್ನು ಅರಮನೆಗೆ ಕರೆತರುವಂತೆ ಕೃಷ್ಣದೇವರಾಯರು ಆದೇಶಿಸುತ್ತಾರೆ. ತೆನಾಲಿ ರಾಮ ಅರಮನೆಗೆ ಆಗಮಿಸುತ್ತಾನೆ, ವಿಚಾರಣೆ ಆರಂಭವಾಗುತ್ತದೆ. ತೆನಾಲಿ ರಾಮ ತಾನು ಕದ್ದಿಲ್ಲವೆಂದು ವಾದಿಸುತ್ತಾನೆ.

ಪ್ರಧಾನ ಮಂತ್ರಿಗಳಿಗೆ ತೆನಾಲಿ ರಾಮ ಸುಳ್ಳು ಹೇಳುತ್ತಿದ್ದಾನೆ ಎಂಬುದು ಅರಿವಿಗೆ ಬರುತ್ತದೆ.  ಅವರು ಕೂಡಲೇ ತೆನಾಲಿ ರಾಮನ ಮುಗ್ದ ಮಗನನ್ನು ಕೇಳಿದರೆ ಸತ್ಯ ಅರಿಕೆಯಾಗಬಹುದೆಂದು ಭಾವಿಸಿ ತೆನಾಲಿ ರಾಮನ ಮಗನನ್ನು ಅರಮನೆಗೆ ಕರೆತರುವಂತೆ ಭಟರನ್ನು ಕಳುಹಿಸುತ್ತಾನೆ. ಈಗ ಇಬ್ಬರೂ ರಾಜರ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಾರೆ. ಅಲ್ಲಿ ಕಣ್ಣು ಮಿಸುಕುವುದಕ್ಕೂ ಅವಕಾಶವಿಲ್ಲ. ಈಗ ಅರಸರು ನೇರವಾಗಿ ತೆನಾಲಿ ರಾಮನ ಮಗನನ್ನು ಪ್ರಶ್ನಿಸುತ್ತಾರೆ.'ಮಗು ನೀನು ರಾತ್ರಿ ಏನು ಊಟ ಮಾಡಿದೆ ಎಂಬ ನೆನಪಿದೆಯೇ?'. ಹುಡುಗ ಹೇಳುತ್ತಾನೆ 'ಹಾಂ..ನೆನಪಿದೆ. ಅನ್ನ ಅದಕ್ಕೆ ಬದನೇಕಾಯಿ ಗೊಜ್ಜು. ಬದನೇಕಾಯಿ ಗೊಜ್ಜು ಬಹಳ ಅದ್ಭುತವಾಗಿತ್ತು, ಅಂತಹ ಗೊಜ್ಜನ್ನು ಹಿಂದೆಲ್ಲೂ ನಾನೂ ತಿಂದದ್ದೇ ಇಲ್ಲ'. ಕೃಷ್ಣದೇವರಾಯರ ಕಣ್ಣು ಕೆಂಪಗಾಗುತ್ತದೆ. ತೆನಾಲಿ ರಾಮನ ಕಡೆ ತಿರುಗಿ 'ಸುಳ್ಳು ಬೊಗಳುವ ನಿನಗೆ...' ಎಂದು ಮಾತು ಮುಂದುವರಿಸುವ ಮೊದಲೇ ತೆನಾಲಿ ರಾಮ 'ಪ್ರಭುಗಳು ಮನ್ನಿಸಬೇಕು, ನಾನು ನೆನ್ನೆ ತಮ್ಮ ಭೋಜನ ಕೂಟದಲ್ಲಿ ತಿಂದ ಬದನೆಕಾಯಿ ಗೊಜ್ಜಿನ ಬಗ್ಗೆ ಮನೆಯಲ್ಲಿ ವಿವರಿಸುತ್ತಿದ್ದೆ. ಹಾಗಾಗಿ ಎಲ್ಲೋ ಅದೇ ಇವನಿಗೆ ಕನಸಿನಲ್ಲಿ ಬಂದಿರಬೇಕು. ಅರಮನೆಯಲ್ಲಿ ಬೆಳೆದ ಬದನೆಕಾಯಿಯೆಂದರೇನು? ಅದನ್ನು ಮುಟ್ಟುವ ಯೋಗ್ಯತೆ ನನಗೆಲ್ಲಿಂದ ಬರಬೇಕು' ಎಂದು ನಾಟಕವಾಡಿಬಿಟ್ಟನು. 'ಅದೂ ಸಾಲದೇ ಇವನಿಗೆ ವಿಪರೀತ ಸ್ವಪ್ನ ಬಾಧೆಯಿದೆ, ಕನಸಿನಲ್ಲಿ ನಡೆದಿದ್ದೆಲ್ಲ ನಿಜವೆಂದುಕೊಂಡು ನಮಗೆ ಎಷ್ಟೋ ಬಾರಿ ತಲೆಕೆಡಿಸಿದ್ದಾನೆ' ಎಂದು ಬಿಟ್ಟ. ಈ ಮಾತು ಕೇಳಿದ ಮೇಲೆ ರಾಜರಿಗೆ ಹುಡುಗನ ಮಾತಿನ ಮೇಲೆ ಮತ್ತೆ ಅನುಮಾನವುಂಟಾಯಿತು.

ಆಗ ಹುಡುಗನನ್ನು ಹತ್ತಿರಕ್ಕೆ ಕರೆದ ಮಹಾರಾಜರು 'ಮಗೂ ನೆನ್ನೆ ರಾತ್ರಿ ನೀನು ಏನೇನು ಮಾಡಿದೆ ಹೇಳುವೆಯಾ?' ಎನ್ನುತ್ತಾರೆ. ಹುಡುಗ ಎಲ್ಲವನ್ನೂ ವಿವರಿಸಲು ಮುಂದಾಗುತ್ತಾನೆ, 'ನೆನ್ನೆ ಶಾಲೆಯಿಂದ ಬಂದ ತಕ್ಷಣ ಆಟವಾಡಿ ನಂತರ ಮನೆಗೆಲಸಗಳೆನ್ನೆಲ್ಲಾ ಮುಗಿಸಿ ಉಪ್ಪರಿಗೆಯ ಮೇಲೆ ವಿಶ್ರಾಂತಿಗೆಂದು ಮಲಗಿದ್ದೆ ಹಾಗೇ ನಿದ್ರೆ ಹತ್ತಿಬಿಟ್ಟಿತ್ತು. ಅನಂತರ ನನಗೆ ಎಚ್ಚರವಾಗಿದ್ದು ಮಳೆ ಬಂದ ನಂತರವೇ. ಮಳೆಯಿಂದ ನೆನೆದು ಒದ್ದೆಯಾದ ನನ್ನನ್ನು ನನ್ನ ತಾಯಿ ಒಳಗೆ ಕರೆದು ಊಟ ಮಾಡಿಸಿ ಮಲಗಿಸಿದಳು' ಎಂದ. ಆದರೆ ನಿಜದಲ್ಲಿ ತಿಂಗಳಾನುಗಟ್ಟಲೆಯಿಂದ ವಿಜಯನಗರದಲ್ಲಿ ಮಳೆಯೇ ಬಂದಿರಲಿಲ್ಲ. ಇದನ್ನು ಕೇಳಿಸಿಕೊಂಡ ಕೃಷ್ಣದೇವರಾಯನು ಹುಡುಗನು ನಿಜವಾಗಿಯೂ ಕನಸು ಕಂಡಿರಬಹುದೆಂದೂ, ಸುಮ್ಮನೆ ತೆನಾಲಿ ರಾಮನ ಮೇಲೆ ಅನುಮಾನ ಪಡುವುದು ತಪ್ಪೆಂದು  ತೆನಾಲಿ ರಾಮಕೃಷ್ಣನ ಶಿಕ್ಷೆಯಿಂದ ತಪ್ಪಿಸಿ ಬಿಟ್ಟು ಬಿಟ್ಟರು. ಹೀಗೆ ತೆನಾಲಿ ರಾಮಕೃಷ್ಣನು ತನಗೆ ಒಲಿದಿದ್ದ ಆಪತ್ತೊಂದನ್ನು ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ನಿವಾರಿಸಿಕೊಂಡನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...