ಶನಿವಾರ, ಅಕ್ಟೋಬರ್ 8, 2016

ಗಾಂಧೀಜಿಯ ನಕಲಿ ಫೋಟೋಗಳು

ಕಲಾವಿದನಾದವನು, ತಂತ್ರಜ್ಞನಾದವನು ಅಥವಾ ಯಾರೇ ಆಗಿರಲಿ ತನಗೆ ಗೊತ್ತಿರುವ ಕಾರ್ಯವನ್ನು ರಚನಾತ್ಮಕ ಕ್ರಿಯೆಗಳಲ್ಲಿ ಬಳಸಿಕೊಳ್ಳುವ ಬಗ್ಗೆ ಹೆಚ್ಚಾಗಿ ಯೋಚಿಸಬೇಕು. ಆಗಲೇ ಅವನು ಕಲಿತ ವಿದ್ಯೆಗೆ, ಒಲಿಸಿಕೊಂಡ ಸರಸ್ವತಿಗೆ ಒಂದು ಬೆಲೆ. ಆದರೆ ಜಗತ್ತು ಬೆಳೆದಂತೆಲ್ಲಾ ತಾವು ಕಲಿತ ವಿಚಾರಗಳನ್ನು ವಿಕೃತಗಳಿಗೂ ಬಳಸುವಲ್ಲಿ ಮಗ್ನರಾಗುತ್ತಿರುವ ವಿದ್ಯಾವಂತರು ನಿಜಕ್ಕೂ ದೇಶದ ದುರಂತವೇ ಸರಿ. ಅಂತಹ 'ವಿಕೃತ ಜ್ಞಾನಿಗಳ' ಕೈಚಳಕದಿಂದ ಏನಾಗಿದೆ? ಇತ್ತ ನೋಡಿ.

ಗಾಂಧೀಜಿ ದೇಶ ಕಂಡ ಅಪ್ರತಿಮ ಅಹಿಂಸಾ ನಾಯಕ. ದೇಶಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ಮಂದಗಾಮಿಗಳ ಕೈ ಮುಂದೋ? ಅಥವಾ  ತೀವ್ರಗಾಮಿಗಳ ಕೈ ಮುಂದೋ ? ಎಂದು ತರ್ಕಕ್ಕಿಳಿಯುವ ಬದಲು, ತಮಗೆ ತೋಚಿದ ಮಾರ್ಗದಲ್ಲಿ ನಮ್ಮ ಪೂರ್ವಜರೆಲ್ಲರೂ ಸೇರಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟು ಹೊರಟು ಹೋಗಿದ್ದಾರೆ.ಶಾಂತಿಮಾರ್ಗ, ಕ್ರಾಂತಿ ಮಾರ್ಗ, ವಾಮ ಮಾರ್ಗ ಹೀಗೆ ಯಾವ್ಯಾವ ಬಗೆಯ ಹೋರಾಟಗಳಿವೆಯೋ ಎಲ್ಲವೂ ಸ್ವಾತಂತ್ರ್ಯಕ್ಕಾಗಿ ಆಗಿ ಹೋಗಿದ್ದು ಈ ದೇಶ ಕಂಡ ಅವರ್ಣನೀಯ ಕ್ರಾಂತಿ. ಇಂತಿಪ್ಪ ಕ್ರಾಂತಿಯೊಳಗೆ ಮಹಾತ್ಮ ಗಾಂಧೀಜಿ ಆಯ್ದುಕೊಂಡಿದ್ದು ಶಾಂತಿ ಮಾರ್ಗ, ಅಹಿಂಸಾ ಮಾರ್ಗ.    ಇಷ್ಟಕ್ಕೂ ಅಹಿಂಸಾ ಮಾರ್ಗ ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಇತಿಹಾಸ ಪುಟಗಳನ್ನೊಮ್ಮೆ ತಿರುವಿ ಅವಗಾಹಿಸಿದರೆ ಕ್ರಾಂತಿಗಳ ನಡುವೆ ಶಾಂತಿ ಹೊದ್ದುಕೊಂಡು ಬಂದು ಅದ್ಭುತಗಳನ್ನೇ  ಸೃಷ್ಟಿಸಿದ ಬೇಕಾದಷ್ಟು ಜನರಿದ್ದಾರೆ. ಅದಕ್ಕೆ ಮಾದರಿ ಉದಾಹರಣೆಯೆಂದರೆ ಕದಂಬರ ದೊರೆ 'ಮಯೂರ ವರ್ಮ'. ಕುತಂತ್ರ ಕುಯುಕ್ತಿಗಳಿಂದ ಪಲ್ಲವರ ಪಾಲಾದ ತನ್ನ ತಂದೆಯ ರಾಜ್ಯವನ್ನು ರಕ್ತಪಾತವಿಲ್ಲದೆ ಪಡೆದುಕೊಳ್ಳುತ್ತಾನೆ, ಅದೂ ತಾನು ಅಪ್ರತಿಮ ವೀರನಾಗಿದ್ದುಕೊಂಡು. ಮಯೂರ ವರ್ಮ ಶಾಂತಿ ಶಾಂತಿಎಂದು ಎಲ್ಲೆಡೆ ಹೇಳಿಕೊಂಡು ತಿರುಗದೆ ಮಾಡಿ ತೋರಿಸಿದ್ದಾನೆ. ಕ್ಷುಲ್ಲಕ ಕಾರಣಗಳಿಗೆ ರಕ್ತ ಚೆಲ್ಲಿ, ಒಂದಷ್ಟು ಜೀವಗಳನ್ನು ಕೈಲಾಸಕ್ಕೆ ಕಳುಹಿಸಿ ಕಟ್ಟುವ ರಾಜ್ಯವಾಗಲಿ, ದೇಶವಾಗಲಿ ಅದು ಮಡಿದವರ ಸಮಾಧಿಯ ಮೇಲೆ ಕಟ್ಟುವ ಅರಮನೆಯಂತಿರುತ್ತದೆ ಹೊರತು ನಂದನವನವಾಗಲು ಸಾಧ್ಯವೇ?.

ಗಾಂಧೀಜಿಯ ಅಹಿಂಸಾ ವಾದ ಅದೇಕೋ ಕೆಲವಷ್ಟು ಜನರಿಗೆ ರುಚಿಸಲಿಲ್ಲ. ಇದು ಆಗಿನ ಕ್ರಾಂತಿಕಾರಿಗಳಿಗೆ ಮಾತ್ರವಲ್ಲ, ಈಗಿನ ಬುದ್ಧಿಜೀವಿಗಳಲ್ಲಿ ಕೆಲವರಿಗೂ ಅದು ರುಚಿಸುತ್ತಿಲ್ಲ. ಹೀಗಾಗಿ ಗಾಂಧೀಜಿ ದೇಶಕ್ಕೆ ಕೊಟ್ಟ ಕೊಡುಗೆ ಕೆಲವರಿಗೆ ನಗಣ್ಯವಾಗಿ ಕಾಣುತ್ತಿದೆ. ಇತರ ವಿಚಾರಧಾರೆಗಳಿಂದ ಪ್ರಭಾವಿತರಾದ ಕೆಲವು ಬುದ್ಧಿವಂತರು ಗಾಂಧೀಜಿಯ ಕೆಲವು ಚಿತ್ರಗಳನ್ನು ಬಳಸಿಕೊಂಡು ಆತ್ಮ ವಧೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ಗಾಂಧೀಜಿ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ನಾಳಿನ ಪ್ರಜೆಗಳ ಮನಸಿನಲ್ಲಿ ಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದಾರೆ. ಆ ಕೆಲವು ಫೋಟೋಗಳು ಇಲ್ಲಿವೆ.

ಯುವತಿಯೊಂದಿಗೆ ಗಾಂಧೀಜಿ 



ಗಾಂಧೀಜಿ ನೆಹರು ಜೊತೆ ಸಂಭಾಷಣೆಯಲ್ಲಿ ನಿರತರಾಗಿದ್ದಾಗ ತೆಗೆದಿರುವ ಚಿತ್ರವನ್ನೇ ಬಳಸಿಕೊಂಡು ಹುಡುಗಿಯೊಬ್ಬಳು ಗಾಂಧೀಜಿಯೊಂದಿಗೆ ಮೂಗಿಗೆ ಮುಗು ತಾಗಿಸಿ ನಗುತ್ತಿರುವಂತೆ ಮಾಡಲಾಗಿದೆ. ಎರಡೂ ಚಿತ್ರಗಳಲ್ಲಿ ಗಾಂಧೀಜಿ ಹಿಡಿರುವ ಕಾಗದದ ಕಂತೆ, ಹಿಂದಿನ ಗೋಡೆ ಎಲ್ಲವೂ ಹೋಲುತ್ತಿದ್ದು ನೆಹರು ಬದಲಿಗೆ ಹುಡುಗಿಯೊಬ್ಬಳು ಇರುವಂತೆ ಎಡಿಟ್ ಮಾಡಲಾಗಿದೆ.

ನೃತ್ಯ ನಿರತ ಗಾಂಧೀಜಿ


ಸದಾ ಕಾಲ ಉಪವಾಸ, ಸಂಪೂರ್ಣ ಮೈ ಮುಚ್ಚಿಕೊಳ್ಳದೆ ತಿರುಗುವ ವಯಸ್ಸಾದ ದೇಹಕ್ಕೆ ಸದೃಢ ಮೈಕಟ್ಟು ಬರುವುದೆಂದರೇನು? ..ಹಾಗೆ ಬರಲು ಸಾಧ್ಯವೇ?..ಹುಡುಗಿಯೊಂದಿಗೆ ನೃತ್ಯ ನಿರತರಾಗಿರುವ ಗಾಂಧೀಜಿ ತೋಳುಗಳನ್ನೊಮ್ಮೆ ಗಮನಿಸಿ. ಗಾಂಧೀಜಿಯ ಮೈಕಟ್ಟು ಅದಲ್ಲ ಎನ್ನುವ ಪುರಾವೆ ಪಕ್ಕದಲ್ಲೇ ಇದೆ.  ಹಾಗೇ ಭಾರತದಲ್ಲಿ ಎಷ್ಟೋ ಕಡೆ ಗಾಂಧೀಜಿ ಬಳಸಿದ ಸಾಮಗ್ರಿಗಳನ್ನು ವಸ್ತು ಸಂಗ್ರಹಾಲಯದಲ್ಲಿ ಕಾಣ ಬಹುದಾಗಿದೆ. ಭಾರತದಲ್ಲಷ್ಟೇ ಅಲ್ಲದೆ ಹೊರದೇಶಗಳೂ ಕೂಡ ಆಗೊಮ್ಮೆ ಈಗೊಮ್ಮೆ ಗಾಂಧೀಜಿ ಬಳಸಿದ ವಸ್ತುಗಳನ್ನು ಹರಾಜು ಮಾಡುತ್ತಿರುತ್ತವೆ. ಅಲ್ಲೆಲ್ಲೂ ಕಾಣಸಿಗದ ಗಾಂಧೀಜಿ ಪಾದರಕ್ಷೆಗಳ ಶೈಲಿ ಈ ಚಿತ್ರದಲ್ಲಿ ಮಾತ್ರ ಸಿಕ್ಕಿದ್ದು ಹೇಗೆ?. ಅವು ಗಾಂಧೀಜಿಯ ಪದರಕ್ಷೆಗಳಲ್ಲ ಎನ್ನುವುದು ಅಲ್ಲಿಗೆ ಖಾತ್ರಿಯಾಯಿತು.
ಇನ್ನು ಮುಂತಾಗಿ ಹೀಗೆ ಇನ್ನು ಎಷ್ಟು ವಿಕೃತಗೊಳಿಸಿದ ಚಿತ್ರಗಳಿವೆಯೋ ಗೊತ್ತಿಲ್ಲ. ಸದ್ಯಕ್ಕೆ ಗೂಗಲ್ ನಲ್ಲಿ ಈ ಎರಡೂ ಚಿತ್ರಗಳು ಲಭ್ಯವಿದ್ದು, ಒಮ್ಮೊಮ್ಮೆ ಕೆಲವರು ಸಾಮಾಜಿಕ  ಜಾಲ ತಾಣಗಳಲ್ಲಿ ಇಂತಹ ನಕಲಿ ಚಿತ್ರಗಳನ್ನು ಹರಿಯಬಿಡುತ್ತಿದ್ದಾರೆ. 

ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಸಂವಿಧಾನದ ಆಶಯಕ್ಕೆ ಬದ್ಧರಾಗಿ ಬದುಕುತ್ತಾ ಇಂತಹ ವಿಕೃತಿಗಳನ್ನು ನಿರಾಕರಿಸಿ ಸತ್ಪ್ರಜೆಗಳಾಗುವ ಕಡೆಗೆ ನಮ್ಮೆಲ್ಲರ ಮನಸ್ಸನ್ನು ಹರಿಸೋಣ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...